ಉದಯವಾಹಿನಿ, ಬೆಂಗಳೂರು: ಚುನಾವಣೆಯಲ್ಲಿ ಬಳಕೆ ಮಾಡುವ ಮತ ಯಂತ್ರಗಳು ಮತ್ತು ಮತದಾರರ ಪಟ್ಟಿಯಲ್ಲಿನ ಲೋಪಗಳ ಬಗ್ಗೆ ಕಳೆದ ಮೂರು ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಆಯೋಗ ಅಂದಿನಿಂದಲೂ ತನಿಖೆ ನಡೆಸುವ ಬದಲಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಆಕ್ಷೇಪಿಸಿದ್ದಾರೆ.

ಈ ಹಿಂದೆ 2022ರಲ್ಲಿ ಆಗಿನ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಅವರಿಗೆ ತಾವು ಬರೆದಿದ್ದ ಪತ್ರ ಹಾಗೂ ಅದರ ನಂತರದ ಬೆಳವಣಿಗೆಗಳನ್ನು ವಿವರಿಸಿರುವ ಎಚ್‌.ಕೆ. ಪಾಟೀಲ್‌ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. 1998ರಿಂದ 2017ರ ವರೆಗೂ ಕೇಂದ್ರ ಚುನಾವಣಾ ಆಯೋಗ ಎಲೆಕ್ಟ್ರಾನಿಕ್‌ ಮತಯಂತ್ರಗಳ ಖರೀದಿಗೆ ಸಲ್ಲಿಸಿದ್ದ ಪ್ರಸ್ತಾವನೆಗಳು, ಭಾರತೀಯ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನಿಂದ ಪೂರೈಕೆಯಾಗಿರುವ ಮತ ಯಂತ್ರಗಳ ವಿವರಗಳನ್ನು ಮುಂಬೈನ ಆರ್‌ಟಿಐ ಕಾರ್ಯಕರ್ತ ಮನೋರಂಜನ್‌ ಸಂತೋಷ್‌ ರಾಯ್‌ ಬಹಿರಂಗಪಡಿಸಿದರು. ಅದರ ಆಧಾರದ ಮೇಲೆ 15 ವರ್ಷಗಳಲ್ಲಿ 9 ಲಕ್ಷಕ್ಕೂ ಅಧಿಕ ಮತಯಂತ್ರಗಳ ಪೂರೈಕೆಯಲ್ಲಿ ವ್ಯತ್ಯಾಸಗಳಾಗಿವೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ತಾವು ಆಗಿನ ವಿಧಾನಸಭಾ ಅಧ್ಯಕ್ಷ ಕಾಗೇರಿ ಅವರಿಗೆ ಪತ್ರ ಬರೆದಿರುವುದನ್ನು ಸರಿಸಿಕೊಂಡಿದ್ದಾರೆ. ಆ ಪತ್ರವನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ನೀಡುವ ಕುರಿತಂತೆ ಅಭಿಪ್ರಾಯ ತಿಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಸಭಾಧ್ಯಕ್ಷರು ಪತ್ರ ಬರೆದಿದ್ದರು. ಪ್ರತ್ಯುತ್ತರಿಸಿದ ಆಯೋಗ ಚರ್ಚೆಗೆ ಅವಕಾಶ ನಿರಾಕರಿಸಿತ್ತು ಎಂದು ಎಚ್‌.ಕೆ. ಪಾಟೀಲ್‌ ವಿವರಿಸಿದ್ದಾರೆ.2022ರಲ್ಲಿ ಕಾಗೇರಿಯವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಾಗ, ಪ್ರಮಾಣ ಪತ್ರ ಸಲ್ಲಿಸುವಂತೆ ಕೇಳಿರಲಿಲ್ಲ. ಈಗ ರಾಹುಲ್‌ ಗಾಂಧಿ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರೇ ಪ್ರಮಾಣ ಪತ್ರ ಸಲ್ಲಿಸುವಂತೆ ಚುನಾವಣೆ ಆಯೋಗ ಕೇಳುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದ ಸಚಿವರು, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಯಾವುದೇ ನೆಪ ಹೇಳದೆ ಚುನಾವಣಾ ಆಯೋಗ ತಕ್ಷಣವೇ ತನಿಖೆ ನಡೆಸಬೇಕು. ರಾಹುಲ್‌ ಗಾಂಧಿ ಅವರು ಬಿಡುಗಡೆ ಮಾಡಿರುವ ದಾಖಲಾತಿಗಳು ಹಾಗೂ ವೈಜ್ಞಾನಿಕ ವಿಶ್ಲೇಷಣೆಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!