ಉದಯವಾಹಿನಿ, ಕ್ಯಾಲಿಫೋರ್ನಿಯಾ: ಮುಸುಕುಧಾರಿ ಕಳ್ಳರ ಗುಂಪೊಂದು ಅಂಗಡಿಯಿಂದ ಡಾಲರ್ 7,000 (ಭಾರತೀಯ ರೂ.ಗಳಲ್ಲಿ ಸುಮಾರು ₹ 5,81,000) ಮೌಲ್ಯದ ಲಬುಬು ಗೊಂಬೆಗಳನ್ನು ಕದ್ದೊಯ್ದ ಘಟನೆ ಕ್ಯಾಲಿಫೋರ್ನಿಯಾದ ಲಾ ಪುಯೆಂಟೆಯಲ್ಲಿ ನಡೆದಿದೆ. ಈ ಘಟನೆ ಆಗಸ್ಟ್ 6ರ ಬೆಳಗ್ಗೆ ಸಂಭವಿಸಿದೆ. ಕಳ್ಳತನದ ಸಮಯದಲ್ಲಿ ಶಂಕಿತರು ಕದ್ದಿರುವ ಟೊಯೋಟಾ ಟಕೋಮಾ ವಾಹನವನ್ನು ಬಳಸಿದ್ದಾರೆ ಎನ್ನಲಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡರು.
ಕಳ್ಳರು ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ದೃಶ್ಯವನ್ನು USA Today ವಿಡಿಯೊ ಹಂಚಿಕೊಂಡಿದೆ. ವಿಡಿಯೊದಲ್ಲಿ, ಮುಸುಕುಧಾರಿ ಕಳ್ಳರು ಅಂಗಡಿಯೊಳಗೆ ನುಗ್ಗಿ, ವಸ್ತುಗಳನ್ನು ಪತ್ತೆ ಹಚ್ಚಿ, ಪೆಟ್ಟಿಗೆಗಳನ್ನು ಹೊರಗೆ ತೆಗೆದುಕೊಂಡು ಹೋಗುವುದನ್ನು ನೋಡಬಹುದು.
ಹಾಂಗ್ ಕಾಂಗ್ ಮೂಲದ ಕಲಾವಿದ ಕೇಸಿಂಗ್ ಲುಂಗ್ ರಚಿಸಿದ ಲಬುಬು ಗೊಂಬೆಗಳು, ಒಂದು ದಶಕದ ಹಿಂದೆ ಬಿಡುಗಡೆಯಾದಾಗಿನಿಂದ ಹೆಚ್ಚು ಬೇಡಿಕೆಯಿರುವ ಸಂಗ್ರಹಯೋಗ್ಯ ವಸ್ತುಗಳಾಗಿವೆ. ಇನ್ನು ಅಂಗಡಿಯಿಂದ ಕಳ್ಳರು ಆಟಿಕೆಗಳನ್ನು ಒಯ್ದಿರುವುದು ಆಘಾತ ತಂದಿದೆ ಎಂದು ಆಟಿಕೆ ಮಾರಾಟಗಾರ ತಿಳಿಸಿದ್ದಾರೆ. ಅಪರಾಧಿಗಳನ್ನು ಗುರುತಿಸಲು ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಒತ್ತಾಯಿಸಿದ್ದಾರೆ.
