ಉದಯವಾಹಿನಿ, ಕಾರವಾರ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿದೆ. ೬ ಮಂದಿ ಅಧಿಕಾರಿಗಳನ್ನೊಳಗೊಂಡ ತಂಡವು ೪ ವಾಹನಗಳಲ್ಲಿ ಆಗಮಿಸಿದ್ದು, ಮನೆಯಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾರಿನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯಲ್ಲಿರುವ ಕೆಲಸದಾಳುಗಳನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳು ನಿವಾಸಕ್ಕೆ ಬರುವಂತೆ ಸತೀಶ್‌ಸೈಲ್ ಅವರಿಗೆ ಸಂದೇಶ ರವಾನೆಯಾಗಿದೆ. ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ ೧೨ ಮಂದಿ ಅರೆಸೇನಾ ಸಶಸ್ತ್ರ ತಂಡದೊಂದಿಗೆ ದಾಳಿ ಮಾಡಲಾಗಿದೆ.
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅದಿರು ಸಾಗಾಟ ನಡೆಸುತ್ತಿದ್ದ ಸತೀಶ್‌ಸೈಲ್ ಈ ಹಿಂದೆ ಅಕ್ರಮ ಅದಿರು ಸಾಗಾಟ ಪ್ರಕರಣಟಲ್ಲಿ ಜೈಲುಶಿಕ್ಷೆ ಅನುಭವಿಸಿದ್ದರು. ಈ ಕುರಿತು ಮಾಜಿ ಲೋಕಾಯುಕ್ತ ಸಂತೋಷ್‌ಹೆಗ್ಡೆ ನೇತೃತ್ವದ ತಂಡ ದೂರು ದಾಖಲಿಸಿತ್ತು.
ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿ ನ್ಯಾಯಾಲಯದಿಂದ ಸತೀಶ್‌ಸೈಲ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ದೋಷಿ ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಸತೀಶ್‌ಸೈಲ್ ಹೊರ ಬಂದಿದ್ದರು. ಆದಾಯಕ್ಕಿಂತ ಅಧಿಕ ಹಣ ಹೊಂದಿದ್ದಾರೆಂಬ ಆರೋಪಗಳು ಇವರ ಮೇಲಿದ್ದು, ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
