ಉದಯವಾಹಿನಿ, ಪಾಟ್ನಾ: 45 ವರ್ಷದ ರೋಗಿಯೊಬ್ಬರ ಕಣ್ಣಿನಲ್ಲಿ ಬೆಳೆಯುತ್ತಿದ್ದ ಹಲ್ಲನ್ನು ಪಾಟ್ನಾ ವೈದ್ಯರು ಹೊರತೆಗೆದಿದ್ದಾರೆ. ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಿವಾನ್ ಜಿಲ್ಲೆಯ 45 ವರ್ಷದ ರವಿ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಹಲವಾರು ತಿಂಗಳುಗಳಿಂದ ಮುಖದ ಊತದಿಂದ ಬಳಲುತ್ತಿದ್ದರು. ಜೊತೆಗೆ ದೃಷ್ಟಿಯೂ ಮಂದವಾಗಿದೆ. ಆರೋಗ್ಯ ಹದಗೆಟ್ಟ ನಂತರ ಅವರನ್ನು ಪಾಟ್ನಾದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಯಿತು. ರೋಗಿಯ ಕಣ್ಣಿನ ಕೆಳಗೆ ಮೂಳೆಯಲ್ಲಿ ಹಲ್ಲು ಇರುವುದನ್ನು ಮತ್ತು ಅದರ ಬೇರುಗಳು ಕಣ್ಣಿನ ಕುಳಿಗೆ ತಲುಪಿರುವುದನ್ನು ನೋಡಿ ವೈದ್ಯರು ಆಶ್ಚರ್ಯಚಕಿತರಾದರು. ಕಣ್ಣಿನಲ್ಲಿ ಹಲ್ಲು ಎಂದು ಕರೆಯಲ್ಪಡುವ ಈ ಸ್ಥಿತಿಯು ಅತ್ಯಂತ ಅಪರೂಪದ ಪ್ರಕರಣವಾಗಿದೆ.
ರೋಗಿಯನ್ನು ದಂತ ವಿಭಾಗದ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ನಿಮ್ಮಿ ಸಿಂಗ್ ಅವರು ಪರಿಶೀಲಿಸಿದರು. ಪ್ರಕರಣದ ತೀವ್ರತೆಯನ್ನು ಗುರುತಿಸಿದ ಡಾ. ಸಿಂಗ್, ಡಾ. ಪ್ರಿಯಾಂಕರ್ ಸಿಂಗ್ ಮತ್ತು ಅರಿವಳಿಕೆ ತಜ್ಞರನ್ನು ಒಳಗೊಂಡ ವಿಶೇಷ ಶಸ್ತ್ರಚಿಕಿತ್ಸಾ ತಂಡ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
ಹಲ್ಲಿನ ಬೇರುಗಳ ನಿಖರವಾದ ಸ್ಥಾನ ಮತ್ತು ಆಳವನ್ನು ನಿರ್ಧರಿಸಲು ಸಿಬಿಸಿಟಿ ಸ್ಕ್ಯಾನಿಂಗ್ ನಡೆಸಲಾಯಿತು. ಪರೀಕ್ಷೆಯಲ್ಲಿ ಹಲ್ಲು ಕಣ್ಣಿನ ಕುಳಿಯಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಅದನ್ನು ತೆಗೆದುಹಾಕುವುದು ಅಸಾಧಾರಣ ಸವಾಲಿನ ಕೆಲಸವಾಗಿತ್ತು. ಶಸ್ತ್ರಚಿಕಿತ್ಸಾ ತಂಡ ನಡೆಸಿದ ಕೆಲವು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಣ್ಣಿಗೆ ಹಾನಿಯಾಗದಂತೆ ಯಶಸ್ವಿಯಾಗಿ ಹಲ್ಲನ್ನು ಹೊರತೆಗೆದಿದೆ. ಶಸ್ತ್ರಚಿಕಿತ್ಸೆಯ ನಂತರ, ರೋಗಿಯ ದೃಷ್ಟಿ ಸರಿಯಾಗಿದ್ದಲ್ಲದೆ, ಮುಖದ ಊತ ಕಡಿಮೆಯಾಯಿತು.ಈ ಪ್ರಕರಣವನ್ನು ಅತ್ಯಂತ ಅಪರೂಪ ಎಂದು ವಿವರಿಸಿದ ಡಾ. ನಿಮ್ಮಿ ಸಿಂಗ್, ಹಲ್ಲುಗಳು ಸಾಮಾನ್ಯವಾಗಿ ಬಾಯಿಯೊಳಗೆ ಬೆಳೆಯುತ್ತವೆ. ಆದರೆ ಈ ರೋಗಿಯ ಹಲ್ಲು, ಕಣ್ಣಿನ ಕೆಳಗೆ ಬೆಳೆದಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!