ಉದಯವಾಹಿನಿ, ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಜತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ‌ ಮಾಡಿದ್ದ ಸ್ಯಾಂಡಲ್‌ವುಡ್‌ ಹಿರಿಯ ನಿರ್ದೇಶಕ ಮುರಳಿ ಮೋಹನ್ ಅನಾರೋಗ್ಯದಿಂದ ನಿಧನ ಹೊಂದಿದರು. 56 ವರ್ಷದ ಅವರು ಬಹುಅಂಗಾಂಗ ವೈಫಲ್ಯದಿಂದ ಆಗಸ್ಟ್‌ 13ರಂದು ಮೃತಪಟ್ಟರು. ಉಪೇಂದ್ರ ಜತೆಗೆ ʼಶ್ʼ, ʼಓಂʼ ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಮುರಳಿ ಮೋಹನ್‌ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೆ ಕೆಲವು ತಿಂಗಳ ಅನಾರೋಗ್ಯ ಕಾಡುತ್ತಿದೆ, ದಯವಿಟ್ಟು ಬದುಕಿಸಿ ಎಂದು ಮನವಿ ಮಾಡಿದ್ದರು. ಆದರೆ ಇದೀಗ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಮೂತ್ರಪಿಂಡ ಕಸಿ‌ ಚಿಕಿತ್ಸೆಗೆ 25 ಲಕ್ಷ ರೂ. ಅಗತ್ಯವಿದ್ದು, ದಾನಿಗಳು ಹಣಕಾಸಿನ ನೆರವು ನೀಡಿ ಎಂದು ಚಿತ್ರರಂಗದ ಆತ್ಮೀಯರ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಮುರಳಿ ಮೋಹನ್ ಮನವಿ ಪತ್ರ ಹಾಕಿದ್ದರು.
ಕಿಡ್ನಿ ಸಮಸ್ಯೆ ಜತೆ ಹೃದಯ ಸಂಬಂಧಿ ಕಾಯಿಲೆಯಿಂದಲೂ ಮುರಳಿ ಮೋಹನ್ ಬಳಲುತ್ತಿದ್ದರು. ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಮುರಳಿ ಮೋಹನ್‌, ರಿಯಲ್‌ ಸ್ಟಾರ್‌ ಉಪೇಂದ್ರ ಅವರಿಗೆ ಆಪ್ತ ಸ್ನೇಹಿತರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ,ನಿರ್ದೇಶಕರಾಗಿ, ನಟರಾಗಿ, ಸಂಭಾಷಣೆಕಾರರಾಗಿಯೂ ಗುರುತಿಸಿಕೊಂಡಿದ್ದರು. 2018ರಿಂದಲೇ ಮುರಳಿ ಮೋಹನ್‌ ಅವರಿಗೆ ಅನಾರೋಗ್ಯ ಬಾಧಿಸುತ್ತಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುರಳಿ ಮೋಹನ್‌, ವಾರಕ್ಕೆ 3 ದಿನಗಳ ಕಾಲ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. 2020 ರಲ್ಲೇ ಕಿಡ್ನಿ ಟ್ರ್ಯಾನ್ಸ್‌ಪ್ಲಾಂಟ್‌ಗೆ ಮುರಳಿ ಮೋಹನ್‌ ಒಳಗಾಗಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!