ಉದಯವಾಹಿನಿ, ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮಹಾಶಯರು, ಅಮೆರಿಕದ ಅಧ್ಯಕ್ಷರ ಜತೆಯಲ್ಲಿ ಮೇಜಿನ ಮುಂದೆ ಕೂತು ‘ಭೋಜನ’ ಮಾಡಿದ್ದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆಗ ಕೆಲವಷ್ಟು ರಾಜಕೀಯ ಪಂಡಿತರು, “ಆ ಟ್ರಂಪಣ್ಣನೋ ಮಹಾನ್ ತಲೆ ತಿರುಕ, ಈ ಮುನೀರಣ್ಣನೋ ಮಹಾನ್ ತಲೆಹರಟೆ; ಎರಡೂ ಜತೆಗೂಡಿದರೆ ಏನಾದರೊಂದು ಯಡವಟ್ಟು ಗ್ಯಾರಂಟಿ ಕಣ್ರೀ” ಎಂಬ ಧಾಟಿಯಲ್ಲಿ ಮಾತಾಡುತ್ತಾ ಸಿಗರೇಟಿನ ಬೂದಿಯನ್ನು ಕೊಡವಿದ್ದರು. ಆ ಮಾತೀಗ ನಿಜವಾಗಿದೆ ನೋಡಿ. ಟ್ರಂಪಣ್ಣ ತಮ್ಮ ಬೆನ್ನಿಗಿದ್ದಾರೆ ಎಂಬ ಭಂಡ ಧೈರ್ಯದಲ್ಲಿ ಮುನೀರಣ್ಣ ಮತ್ತೆ ಎದ್ದು ನಿಂತು ‘ಬೌ ಬೌ’ ಅಂದಿದ್ದಾರೆ!
‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ವೇಳೆ ಬುಡಕ್ಕೆ ಬರೆ ಹಾಕಿಸಿಕೊಂಡು ‘ಅಬ್ಬಾಜಾನ್, ಅಬ್ಬು ಆಯ್ತೂ…’ ಎಂಬ ವರಸೆಯಲ್ಲಿ ಗೋಳಿಟ್ಟು ‘ಕದನ ವಿರಾಮ’ದ ಘೋಷಣೆಯಾಗುವಂತೆ ಪರೋಕ್ಷವಾಗಿ ನೋಡಿಕೊಂಡಿದ್ದರು ಈ ‘ಮುನೀರ್ ಮಿಯಾ’. ಆದರೆ ಯಾವಾಗ, ಪಾಕಿಸ್ತಾನ ದೊಂದಿಗಿನ ಪಾಲುದಾರಿಕೆಯಲ್ಲಿ ಅಲ್ಲಿನ ಬೃಹತ್ ತೈಲನಿಕ್ಷೇಪಗಳನ್ನು ಅಮೆರಿಕ ಅಭಿವೃದ್ಧಿಪಡಿಸ ಲಿದೆ ಎಂಬ ಆಣಿಮುತ್ತನ್ನು ಟ್ರಂಪಣ್ಣ ಉದುರಿಸಿ ಬಿಟ್ಟರೋ ಹಾಗೂ ಭಾರತದಿಂದ ಅಮೆರಿಕಕ್ಕೆ ಬಂದು ಬೀಳುವ ಸರಕು-ಸಾಮಗ್ರಿಗಳ ಮೇಲಿನ ಸುಂಕವನ್ನು ಶೇ.50ಕ್ಕೆ ಏರಿಸಿಬಿಟ್ಟರೋ, ಆಗ ‘ಡೊನಾಲ್ಡ್ ಟ್ರಂಪ್ ಇನ್ನು ಮುಂದೆ ನಮ್ಮ ಸೋದರಮಾವನೇ’ ಎಂಬ ಧಾಟಿಯಲ್ಲಿ ಮುನೀರ್ ಬೀಗತೊಡಗಿದರು ಎನಿಸುತ್ತೆ.
ಹೀಗಾಗಿ, ‘ಭಾರತದ ವಿಷಯದಲ್ಲಿ ತಾವು ಯಾವ ಥರದಲ್ಲಿ ಬಾಲ ಅಲ್ಲಾಡಿಸಿದರೂ, ಟ್ರಂಪಣ್ಣ ನಮಗೆ ಬಿಸ್ಕೆಟ್ ಹಾಕ್ತಾರೆ’ ಎಂಬ ಭಂಡಧೈರ್ಯದಲ್ಲಿ ‘ಮುನೀರ್ ಮಿಯಾ’ ಮತ್ತೆ ಬಾಲ ಬಿಚ್ಚಿದ್ದಾರೆ. ಅಮೆರಿಕದ ನೆಲದಲ್ಲಿ ನಿಂತು ಈತ ಭಾರತ-ವಿರೋಧಿ ಹೇಳಿಕೆ ನೀಡಿರುವುದರ ಜತೆಜತೆಗೆ, “ನಾವು ಅಣ್ವಸ್ತ್ರಗಳನ್ನು ಹೊಂದಿದ್ದೇವೆ. ಒಂದು ವೇಳೆ ಯುದ್ಧಗಳು ನಡೆದು ನಾವು ಸೋತುಹೋಗುತ್ತೇವೆ ಎಂದಾದರೆ, ಆಗ ಅರ್ಧ ಪ್ರಪಂಚವನ್ನೇ ಮುಳುಗಿಸಿ ಹೋಗುತ್ತೇವೆ.
