ಉದಯವಾಹಿನಿ, ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ಕೆಲವೇ ಗಂಟೆಗಳಲ್ಲಿ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಶಾಸಕಿಯ ಅಶಿಸ್ತಿನ ವರ್ತನೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಯನ್ನು ಉಲ್ಲೇಖಿಸಿ ಎಸ್‌ಪಿ (SP) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ. ಗಂಡನ ಹತ್ಯೆ ಮಾಡಿದವರಿಗೆ ಶಿಕ್ಷೆ ನೀಡಿರುವುದಕ್ಕೆ ಪೂಜಾ ಪಾಲ್ ಅವರು ಆದಿತ್ಯನಾಥ್ ಅವರನ್ನು ಹೊಗಳಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದರು ಎಂದು ವಿಧಾನ ಸಭೆಯಲ್ಲಿ ಹೇಳಿದ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಶ್ಲಾಘಿಸಿದರು. ಇದಾದ ಕೆಲವು ಗಂಟೆಗಳ ಬಳಿಕ ಸಮಾಜವಾದಿ ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿದೆ.
ನನ್ನ ಗಂಡನನ್ನು ಕೊಂದ ಹಂತಕನನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಧಿ ಮಾಡಿದರು. ಪ್ರಯಾಗ್‌ರಾಜ್‌ನಲ್ಲಿ ನನ್ನಂತಹ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ಇದು ಅತಿಕ್ ಅಹ್ಮದ್‌ನಂತಹ ಅಪರಾಧಿಗಳ ಹತ್ಯೆಗೆ ಕಾರಣವಾಯಿತು. ನನ್ನ ಅಳಲನ್ನು ಬೇರೆ ಯಾರೂ ಕೇಳದಿದ್ದಾಗ ನನಗೆ ನ್ಯಾಯ ನೀಡಿದ್ದಕ್ಕಾಗಿ ನಾನು ಮುಖ್ಯಮಂತ್ರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಸಮಾಜವಾದಿ ಪಕ್ಷದ ಪೂಜಾ ಪಾಲ್ ತಿಳಿಸಿದ್ದರು.ಯೋಗಿ ಆದಿತ್ಯನಾಥ್ ಅವರ ಶೂನ್ಯ ಸಹಿಷ್ಣುತೆ ನೀತಿಗಳನ್ನು ಸಾರ್ವಜನಿಕವಾಗಿ ಹೊಗಳಿದ ಪೂಜಾ ಪಾಲ್ ಅವರನ್ನು ತಕ್ಷಣವೇ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಈ ಕುರಿತು ಆದೇಶ ಪತ್ರ ಹೊರಡಿಸಿದ ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆಗಸ್ಟ್ 14ರಂದು ಬಿಡುಗಡೆ ಮಾಡಲಾದ ಅಧಿಕೃತ ಉಚ್ಚಾಟನಾ ಪತ್ರದಲ್ಲಿ ಅವರ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಗಂಭೀರ ಅಶಿಸ್ತಿನ ಬಗ್ಗೆ ಉಲ್ಲೇಖಿಸಲಾಗಿದೆ. ಈ ಹಿಂದೆಯೂ ಅವರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಅವರು ಯೋಗಿ ಅವರನ್ನು ಹೊಗಳುವುದನ್ನು ನಿಲ್ಲಿಸಲಿಲ್ಲ. ಇದು ಪಕ್ಷಕ್ಕೆ ಗಣನೀಯ ಹಾನಿಯನ್ನುಂಟು ಮಾಡಿತು. ಹೀಗಾಗಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಮತ್ತು ಇನ್ನು ಮುಂದೆ ಯಾವುದೇ ಎಸ್‌ಪಿ ಕಾರ್ಯಕ್ರಮಗಳು ಅಥವಾ ಸಭೆಗಳಿಗೆ ಆಹ್ವಾನಿಸಲಾಗುವುದಿಲ್ಲ ಎಂದುಪಕ್ಷ ಸ್ಪಷ್ಟಪಡಿಸಿದೆ.
