ಉದಯವಾಹಿನಿ, ಪೇಶಾವರ/ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (POK)ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕನಿಷ್ಠ 154 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಧಾರಾಕಾರ ಮಳೆಯ ನಂತರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಹೆಚ್ಚಿನ ಸಾವುಗಳು ಆಗಿವೆ. ವಿವಿಧ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದಿಂದ ಹಲವಾರು ಕಟ್ಟಡಗಳು ಧ್ವಂಸಗೊಂಡಿವೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ (PoK) ನಲ್ಲಿರುವ ಕಾರಕೋರಂ ಹೆದ್ದಾರಿ ಮತ್ತು ಬಾಲ್ಟಿಸ್ತಾನ್ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಬುನರ್ ಜಿಲ್ಲೆಯಲ್ಲಿ ಒಟ್ಟು 75, ಮನ್ಸೆಹ್ರಾದಲ್ಲಿ 17 ಮತ್ತು ಖೈಬರ್ ಪಖ್ತುನ್ಖ್ವಾದ ಬಜೌರ್ ಮತ್ತು ಬಟಾಗ್ರಾಮ್ ಜಿಲ್ಲೆಗಳಲ್ಲಿ ತಲಾ 18 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿಯಿಂದ ಕೆಲವು ಭಾಗಗಳಲ್ಲಿ ಮೇಘ ಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಮಕ್ಕಳು ಸೇರಿದಂತೆ 125 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (PDMA) ವಕ್ತಾರ ಫೈಜಿ ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ರಕ್ಷಣಾ ತಂಡಗಳು ಮತ್ತು ಸ್ಥಳೀಯ ನಿವಾಸಿಗಳು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಆದಾಗ್ಯೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಜನರು ಕಣ್ಮರೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಬಜೌರ್ ಜಿಲ್ಲಾ ತುರ್ತು ಅಧಿಕಾರಿ (ಡಿಇಒ) ಅಮ್ಜದ್ ಖಾನ್ ಅವರ ಮೇಲ್ವಿಚಾರಣೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಫೈಝಿ ಹೇಳಿದರು.ಸ್ವಾತ್ ಮತ್ತು ಬಜೌರ್‌ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ, ಪಾಕಿಸ್ತಾನ ಸೇನೆಯಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಸಹ ನಡೆಯುತ್ತಿವೆ. ಮುಳುಗಡೆ ಪ್ರದೇಶಗಳಿಂದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸೇನೆಗಳು ಸ್ಥಳಾಂತರಿಸುತ್ತಿವೆ. ಪಿಒಕೆಯ ಮುಜಾಫರಾಬಾದ್ ಜಿಲ್ಲೆಯ ಸರ್ಲಿ ಸಚಾ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು ಒಂದೇ ಕುಟುಂಬದ ಆರು ಜನರು ಸಮಾಧಿಯಾಗಿದ್ದಾರೆ. ಸುಧನೋತಿ ಜಿಲ್ಲೆಯಲ್ಲಿ 26 ವರ್ಷದ ವ್ಯಕ್ತಿಯೊಬ್ಬರು ಹೊಳೆಗೆ ಸಿಲುಕಿ ಸಾವನ್ನಪ್ಪಿದ್ದರೆ, ಬಾಗ್ ಜಿಲ್ಲೆಯಲ್ಲಿ 57 ವರ್ಷದ ಮಹಿಳೆಯೊಬ್ಬರು ಮನೆ ಕುಸಿದು ಸಾವನ್ನಪ್ಪಿದ್ದಾರೆ.
ಮುಂಗಾರು ಆರಂಭವಾದ ಜೂನ್ ತಿಂಗಳಿನಿಂದಲೂ ಪಾಕಿಸ್ತಾನದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, 142 ಮಕ್ಕಳು ಸೇರಿದಂತೆ 325 ಜನರು ಸಾವನ್ನಪ್ಪಿದ್ದಾರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!