ಉದಯವಾಹಿನಿ,ಕಲಬುರಗಿ : ಸಂಸದರಾಗಿರುವ ನಿಮಗೆ ನಿಮ್ಮ ಸ್ಥಾನದ ಹೊಣೆಯ ಅರಿವಿಲ್ಲದಿರಬಹುದು. ಆದರೆ, ನನಗೆ ನನ್ನ ಹೊಣೆಯ ಅರಿವಿದೆ. ಶಾಸಕಾಂಗದ ಕಾರ್ಯವ್ಯಾಪ್ತಿಯ ಅರಿವಿಲ್ಲದ ನೀವು ಅಧಿಕಾರ ಕಳೆದುಕೊಂಡಿದ್ದೇ ಇಂತಹ ಅಜ್ಞಾನಕ್ಕೋಸ್ಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಗೃಹ ಖಾತೆಯ ಕೆಲಸಗಳನ್ನು ಗೃಹ ಸಚಿವ ಜಿ ಪರಮೇಶ್ವರ್ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ಲೀಸ್ ಕೊಟ್ಟಿದ್ದಾರೆಯೇ ಎಂಬ ನಳಿನ್ ಕುಮಾರ್ ಕಟೀಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರು, ನಳಿನ್ ಕುಮಾರ್ ಕಟೀಲ್ ಅವರೇ ನೀವು ಅಧಿಕಾರ ಕಳೆದುಕೊಂಡಿದ್ದೇ ಇಂತಹ ಅಜ್ಞಾನಕ್ಕೋಸ್ಕರ. ಸಂಸದರಾಗಿರುವ ನಿಮಗೆ ನಿಮ್ಮ ಸ್ಥಾನದ ಹೊಣೆಯ ಅರಿವಿಲ್ಲದಿರಬಹುದು, ನನಗೆ ನನ್ನ ಹೊಣೆಯ ಅರಿವಿದೆ ಎಂದು ತಿರುಗೇಟು ನೀಡಿದ್ದಾರೆ.
ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಜಿಲ್ಲೆಯ ಎಲ್ಲಾ ಇಲಾಖೆಗಳ ಆಗುಹೋಗುಗಳಿಗೂ ಹೊಣೆಯಾಗಿರುತ್ತೇನೆ. ನನ್ನ ಜಿಲ್ಲೆಯ ಗೃಹ ಇಲಾಖೆಯನ್ನೂ ನಾನೇ ನಿಯಂತ್ರಿಸಬೇಕಿರುವುದು ನನ್ನ ಕರ್ತವ್ಯ. ನಿಮ್ಮ ಪಕ್ಷದವರಿಗೆ ಇಂತಹ ಸಾಮಾನ್ಯ ಜ್ಞಾನ ಇಲ್ಲದಿರುವುದಕ್ಕಾಗಿಯೇ ಜನತೆ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ. ನಿಮ್ಮ 40% ಸರ್ಕಾರ ಈ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು, ರೈತರು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದನ್ನು ರಾಜ್ಯ ಕಂಡಿದೆ ಎಂದು ಕಿಡಿಕಾರಿದ್ದಾರೆ.
