ಉದಯವಾಹಿನಿ, ಅನೇಕ ದಂತ ಕಥೆಗಳಲ್ಲಿ ಕೃಷ್ಣನ ಕೈಗೆ ಬಂದ ಕೊಳಲಿನ ಮತ್ತೊಂದು ಕಥೆ ಇದು. ಒಮ್ಮೆ ಕೃಷ್ಣ ಬಿದಿರಿನ ಗಿಡದ ಬಳಿಗೆ ಹೋದನು. ಸೂಕ್ಷ್ಮವಾಗಿದ್ದ ಬಿದಿರಿನ ಗಿಡವು ಕೃಷ್ಣನ ಪ್ರೀತಿಯ ಆಗಮನ ವನ್ನು ಅರಿತು ಅವನನ್ನು ನೋಡಿ ಮುಗುಳ್ನಕ್ಕಿತು. ಕೃಷ್ಣನು ಬಿದಿರಿನಿಂದ ತನಗೊಂದು ಕೊಳಲನ್ನು ಮಾಡಿಕೊಳ್ಳುವ ಆಸೆಯನ್ನು ಹೇಳಿದನು. ಆದರೆ ಅದಕ್ಕಾಗಿ ನಾನು ನಿನ್ನನ್ನು ಕತ್ತರಿಸಿ ನಿನ್ನಲ್ಲಿ ರಂಧ್ರಗಳನ್ನು ಕೊರೆಯ ಬೇಕಾಗುತ್ತದೆ. ನಿನಗೆ ಅದರಿಂದ ನೋವಾಗ ಬಹುದು. ನಿನಗೆ ಸಮ್ಮತವೇ? ಎಂದು ಕೇಳಿದನು.
ಬಿದಿರಿನ ಗಿಡವು ಸದಾ ತನ್ನ ಬಗ್ಗೆ ತಾನು ಕೀಳರಮೆಯಿಂದ ಬೇಸರಪಟ್ಟುಕೊಳ್ಳುತ್ತಿತ್ತು. ನನ್ನಲ್ಲಿ ಹೂವಿಲ್ಲ ಹಣ್ಣಿಲ್ಲ, ನನ್ನ ನೆರಳಿಗೂ ಕೂಡ ಯಾರು ನಿಲ್ಲುವುದಿಲ್ಲ. ನಾನು ಯಾರಿಗೂ ಬೇಡವಾದ ವಳು ಎಂದು. ಆದರೆ ಕೃಷ್ಣನ ಈ ಆಸೆ ಕೇಳಿ ಬಿದರಿಗೆ ಮಹದಾನಂದವಾಯಿತು.
ನಗುತಾ ತನ್ನನ್ನು ತಾನೇ ಕೃಷ್ಣನಿಗೆ ಅರ್ಪಿಸಿಕೊಂಡಿತು. ‘ಓ ಕೃಷ್ಣ, ನನ್ನನ್ನು ನಿನಗೆ ಅರ್ಪಿಸಿ ಕೊಂಡು ನಿನ್ನ ಕೈಯಲ್ಲಿ ಕೊಳಲಾಗುವುದು ನನ್ನ ಸೌಭಾಗ್ಯ. ದಯವಿಟ್ಟು ಮತ್ತು ನನ್ನನ್ನು ಕತ್ತರಿಸು’ ಎಂದು ಆನಂದದಿಂದ ನುಡಿಯಿತು. ಕೃಷ್ಣನು ಬಿದಿರನ್ನು ಕತ್ತರಿಸಿ ಅದರಲ್ಲಿ ಎಚ್ಚರಿಕೆ ಯಿಂದ ರಂಧ್ರಗಳನ್ನು ಮಾಡಿದನು. ನಂತರ ಉಜ್ಜಲು ಪ್ರಾರಂಭಿಸಿದನು, ಅಂಚುಗಳನ್ನು ಸಪೂರ ಗೊಳಿಸಿದನು ಒಳಭಾಗವನ್ನು ಸುಗಮಗೊಳಿಸಿದನು. ಇವೆಲ್ಲ ಪ್ರಕ್ರಿಯೆ ಬಿದರಿಗೆ ಬಹಳ ನೋವು ಉಂಟು ಮಾಡಿತು. ಆದರೆ ಕೃಷ್ಣನ ಬೆರಳುಗಳು ಬಿದಿರಿನ ಮೇಲೆ ಕೌಶಲ್ಯದಿಂದ ಚಲಿಸಿ ಅದಕ್ಕೆ ಆಕಾರ ಮತ್ತು ಸೌಂದರ್ಯವನ್ನು ನೀಡುತ್ತಿದ್ದಂತೆ, ನೋವು ಆನಂದವಾಗಿ ರೂಪಾಂತರಗೊಂಡಂತೆ ತೋರಿತು.ಕೃಷ್ಣನು ಬಿದಿರಿನಿಂದ ಸುಂದರವಾದ ಕೊಳಲನ್ನು ಮಾಡಿ ಅದರೊಳಗೆ ಉಸಿರನ್ನು ಊದಿದನು. ಕೃಷ್ಣನ ಉಸಿರು ತಾಕಿದೊಡನೆ ಬೀದಿರಿಗೆ ಹೊಸ ಜೀವ ಬಂದಂತೆ ನಲಿದಾಡಿತು. ಮೊದಲ ಸ್ವರವು ಕೊಳಲಿನಿಂದ ಹೊರಹೊಮ್ಮಿತು, ಕೃಷ್ಣನ ಪ್ರೀತಿಯ ಆಲಾಪಗಳು ಕೊಳಲ ಧ್ವನಿಯಾಗಿ ಅಲೆ ಅಲೆಯಾಗಿ ಹೊರ ಹೊಮ್ಮುತ್ತಾ ಕೇಳುಗರನ್ನೆಲ್ಲಾ ರೋಮಾಂಚನಗೊಳಿಸಿತು.
ಯಾರಿಗೂ ಬೇಡದ ಬಿದಿರು ಈಗ ಕೃಷ್ಣನ ಪ್ರೀತಿಯ ಕೊಳಲಾಗಿ ಸದಾ ಕೃಷ್ಣನೊಂದಿಗೆ ಇರುತ್ತಿತ್ತು. ತನ್ನೊಳಗೆ ಸಂತೋಷ ಉಕ್ಕಿದಾಗೆಲ್ಲ, ಕೃಷ್ಣ ಕೊಳಲನ್ನು ಎತ್ತಿಕೊಂಡು ನುಡಿಸುತ್ತಿದ್ದ ಅವನ ಕೊಳಲಿನ ಸ್ವರಗಳು ಕೇಳುವ ಎಲ್ಲರ ಹೃದಯಗಳನ್ನು ಶುದ್ಧ ಪ್ರೀತಿ ಮತ್ತು ತೀವ್ರವಾದ ಆನಂದ ದಿಂದ ತುಂಬುತ್ತಿದ್ದವು.
ಸದಾ ಕೃಷ್ಣನ ಕೈಯಲ್ಲಿ ನಲಿದಾಡುತ್ತಿದ್ದ ಅವನ ಉಸಿರಿನಲ್ಲಿ ಉಸಿರಾಗುತ್ತಿದ್ದ ಕೊಳಲಿನ ಬಗ್ಗೆ ಗೋಪಿಕೆಯರಿಗೆಲ್ಲ ಅಸೂಯೆ ಹುಟ್ಟಿತು. ನಾನೂ ಕೃಷ್ಣನ ಕೈಯ ಕೊಡಲಾಗಿದ್ದರೆ ಎಷ್ಟು ಚೆಂದ ಎಂದು ಪ್ರತಿ ಗೋಪಿಕೆಯೂ ವಿಷಾದದಿಂದ ಯೋಚಿಸುತ್ತಿದ್ದಳು. ಗೋಪಿಕೆಯರು ಕೊಳಲನ್ನು ಉದ್ದೇಶಿಸಿ ‘ಕೃಷ್ಣ ನಮ್ಮ ಪ್ರಭು ಮತ್ತು ಗುರು, ನಮ್ಮ ಸ್ನೇಹಿತ ಮತ್ತು ಪ್ರಿಯ ಸಖ. ಆದರೂ ಅವನು ನಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಿಲ್ಲ. ಆದರೆ ನೀನು ಸದಾ ಅವನೊಂದಿಗೆ ಇರುತ್ತೀಯ. ಇದು ಹೇಗೆ ಸಾಧ್ಯ?’ ಎಂದಾಗ, ಕೊಳಲು ಸರಳ ವಾಗಿ ಮತ್ತು ಸ್ಪಷ್ಟವಾಗಿ ಉತ್ತರಿಸಿತು, ‘ನಾನು ಒಳಗೆ ಖಾಲಿಯಾಗಿದ್ದೇನೆ. ನನ್ನ ಬಗ್ಗೆ ಯಾವುದೇ ಅಹಂಕಾರ ನನ್ನಲ್ಲಿ ಇಲ್ಲ. ನಾನು ಕೃಷ್ಣನ ಕೈಯಲ್ಲಿ ಇರುವ ಅವನ ಕೊಳಲಷ್ಟೇ, ಅವನು ನನ್ನೊಂದಿಗೆ ಅವನಿಗೆ ಇಷ್ಟವಾದಂತೆ ಮಾಡಲು, ನನ್ನನ್ನು ಉಳಿಸಿಕೊಳ್ಳಲು, ನನ್ನನ್ನು ದೂರ ಎಸೆಯಲು, ನನ್ನನ್ನು ಬದಲಾಯಿಸಲು, ನನ್ನನ್ನು ಮರುರೂಪಿಸಲು ಸರ್ವಸ್ವತಂತ್ರ. ನಾನು ಎಂದಿಗೂ ಪ್ರಶ್ನಿಸುವುದಿಲ್ಲ. ಸಂಪೂರ್ಣ ಸಮರ್ಪಣಾ ಭಾವದಿಂದ ನನ್ನನ್ನು ನಾನು ಕೃಷ್ಣ ನಿಗೆ ಅರ್ಪಿಸಿಕೊಂಡಿದ್ದೇನೆ . ಹೀಗಾಗಿ ನನಗೆ ಈ ಪುಣ್ಯ ಲಭಿಸಿದೆ’ ಎಂದಿತು. ಈ ರೀತಿಯ ಸಮರ್ಪಣಾ ಭಾವ, ನಂಬಿಕೆ ವಿಶ್ವಾಸ ನಮಗೆ ಯಾವುದೇ ಸಂಬಂಧದಲ್ಲಿ ಇದ್ದಾಗಲೂ ಸಹ ಅಲ್ಲಿ ಒಂದು ಸುಂದರವಾದ ಬಾಂಧವ್ಯ ಬೆಸೆದುಕೊಳ್ಳುತ್ತದೆ. ನಾವೆಲ್ಲರೂ ಭಗವಂತನನ್ನು ಭಕ್ತಿಯಿಂದ ಕಾಣುತ್ತೇವೆ. ಆದರೆ ಸಂಪೂರ್ಣವಾಗಿ ನಮ್ಮನ್ನು ಅವನಿಗೆ ಸಮರ್ಪಿಸಿ ಕೊಂಡಾಗ ಮಾತ್ರ, ಒಂದು ಸಮಾಧಾನದ ಸ್ಥಿತಿ ಯಲ್ಲಿ ಬರುವ ಕಷ್ಟಗಳನ್ನೆಲ್ಲ ಅವನಿಗೆ ಸಮ ರ್ಪಿಸಿ ಸ್ಥಿತ ಪ್ರಜ್ಞತೆಯಿಂದ ಬದುಕಲು ಸಾಧ್ಯ. ಕೃಷ್ಣಂ ವಂದೇ ಜಗದ್ಗುರುಂ. ಸರ್ವೇ ಜನಾ ಸುಖಿನೋ ಭವಂತು.
