ಉದಯವಾಹಿನಿ, ನವದೆಹಲಿ: ಪಾಲಕ್‌ ಸೊಪ್ಪು (Spinach) ಎನ್ನುತ್ತಿದ್ದಂತೆ ಒಬ್ಬೊಬ್ಬರಿಗೆ ಒಂದೊಂದು ನೆನಪಾಗಬಹುದು. ಪಾಲಕ್‌ ಪನೀರ್‌, ಪಾಲಕ್‌ ಕಿಚಡಿ, ದಾಲ್‌ ಪಾಲಕ್‌, ಪಾಲಕ್‌ ವಡೆ, ಪಾಲಕ್‌ ತಂಬುಳಿ, ಪಾಲಕ್‌ ಸೂಪು, ಪಾಲಕ್‌ ಸಲಾಡ್‌… ಅವರಿಷ್ಟಕ್ಕೆ ತಕ್ಕಂತೆ ಯಾವ ಖಾದ್ಯವಾದರೂ ಸರಿ, ರುಚಿ ಮತ್ತು ಆರೋಗ್ಯಕ್ಕೆ ಮಾತ್ರ ಯಾವುದರಲ್ಲೂ ಖೋತಾ ಇಲ್ಲ. ಕೇವಲ ರುಚಿಯನ್ನೇ ನೆಚ್ಚಿಕೊಳ್ಳದೆ ಆರೋಗ್ಯದ ಕಾಳಜಿ ಇದ್ದವರಿಗಾದರೆ, ಪಾಲಕ್‌ ಸೊಪ್ಪಿನಿಂದಾಗುವ ಆರೋಗ್ಯದ ಲಾಭಗಳನ್ನು ಎಣಿಸುವುದಕ್ಕೆ ಸಾಧ್ಯವೇ? ಈಗ ಒಂದೊಂದನ್ನೇ ಎಣಿಸುವುದಕ್ಕೆ ಸಾಧ್ಯವೇ ನೋಡೋಣ!
ಮೂಳೆಗಳು ಗಟ್ಟಿ: ಕೆಲವು ಹಸಿರು ಎಲೆಗಳು ನಮ್ಮ ಎಲುಬುಗಳನ್ನು ಬಲಗೊಳಿಸುವಲ್ಲಿ ಮಹತ್ವದ ಕಾಣಿಕೆ ನೀಡಬಲ್ಲವು. ಪಾಲಕ್‌ ಸೊಪ್ಪು ಸಹ ಅವುಗಳಲ್ಲಿ ಒಂದು. ಈ ಸೊಪ್ಪಿನಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್‌ ಕೆ ಅಂಶಗಳು ಸಾಕಷ್ಟಿದ್ದು, ಮೂಳೆಗಳು ಬಲಗೊಳ್ಳುವುದಕ್ಕೆ ಇವೆರಡೂ ಬೇಕು. ನಿಯಮಿತವಾಗಿ ಪಾಲಕ್‌ ಸೊಪ್ಪನ್ನು ಬಳಸುವುದರಿಂದ, ವಯಸ್ಸಾದಂತೆ ಮೂಳೆಗಳ ಸಾಂದ್ರತೆ ಕಡಿಮೆಯಾಗುವ ಆಸ್ಟಿಯೊಪೊರೋಸಿಸ್‌ ರೀತಿಯ ರೋಗಗಳನ್ನು ದೂರ ಇರಿಸಬಹುದು.
ದೃಷ್ಟಿ ಚುರುಕು: ಪಾಲಕ್‌ ಸೊಪ್ಪಿನಲ್ಲಿ ಬೀಟಾ ಕ್ಯಾರೊಟಿನ್‌, ಲೂಟಿನ್‌ ಮತ್ತು ಝೆಕ್ಸಾಂಥಿನ್‌ನಂಥ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಅಧಿಕವಾಗಿದೆ. ಇವುಗಳಿಂದ ದೃಷ್ಟಿದೋಷಗಳು ಬರುವುದು ಕಡಿಮೆಯಾಗುತ್ತದೆ. ವಯಸ್ಸಾದಂತೆ ದೃಷ್ಟಿ ಮಂದವಾಗುವುದು, ಕಣ್ಣಿನ ಪೊರೆ ಎಂದೇ ಕರೆಯಲಾಗುವ ಕ್ಯಾಟರಾಕ್ಟ್‌ ಇತ್ಯಾದಿ ಕಣ್ಣನ್ನು ಬಾಧಿಸುವ ಸಮಸ್ಯೆಗಳನ್ನು ದೂರ ಇರಿಸಬಹುದು.

ಜೀರ್ಣಕಾರಿ: ನಾರಿನಂಶ ಜೀರ್ಣಾಂಗಗಳ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕು. ಕರಗದಿರುವ ನಾರುಗಳು ಮಲಬದ್ಧತೆಯನ್ನು ದೂರ ಮಾಡಿದರೆ, ಕರಗಬಲ್ಲ ನಾರುಗಳು ದೇಹದಲ್ಲಿರುವ ಹೆಚ್ಚಿನ ಕೊಬ್ಬಿನಂಶವನ್ನು ಕರಗಿಸುತ್ತವೆ. ಜೊತೆಗೆ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚುವುದಕ್ಕೆ ನೆರವಾಗುತ್ತವೆ. ಪಾಲಕ್‌ ಸೊಪ್ಪಿನಲ್ಲಿ ನಾರಿನಂಶ ಹೇರಳವಾಗಿದೆ. ಹಾಗಂತ ಇದನ್ನು ಕೇವಲ ಸಾಲಡ್‌ ರೂಪದಲ್ಲಿ ಮಾತ್ರವೇ ತಿನ್ನಬೇಕೆಂದಿಲ್ಲ, ನಿಮ್ಮಿಷ್ಟದ ಯಾವುದೇ ಅಡುಗೆಗೆ ಬಳಸಬಹುದು.

ಚರ್ಮ ಫಳಫಳ: ವಿಟಮಿನ್‌ ಮತ್ತು ಖನಿಜಗಳು ಆಹಾರದಲ್ಲಿ ಹೆಚ್ಚಿದ್ದಷ್ಟೂ ಕೂದಲು ಮತ್ತು ಚರ್ಮ ನಳನಳಿಸುತ್ತವೆ. ಪಾಲಕ್‌ನಲ್ಲಿ ವಿಟಮಿನ್‌ ಸಿ ಮತ್ತು ಎ ಅಪಾರ ಪ್ರಮಾಣದಲ್ಲಿವೆ. ಕೂದಲು ಉದುರುವುದನ್ನು ತಡೆದು, ಅದರ ಬೆಳವಣಿಗೆಯನ್ನು ಈ ಸತ್ವಗಳು ಪ್ರೋತ್ಸಾಹಿಸುತ್ತವೆ. ಮುಖದ ಮೇಲಿನ ಮೊಡವೆಗಳನ್ನು ಮಾಯ ಮಾಡಿ, ತ್ವಚೆಯ ಕಾಂತಿ ಹೆಚ್ಚಿಸುತ್ತವೆ. ಹೀಗೆ ಚರ್ಮದ ಪ್ರಭೆಯನ್ನು ಹೆಚ್ಚಿಸುವುದಕ್ಕೆಂದೇ ಪಾಲಕ್‌ ಜ್ಯೂಸ್‌ ಕುಡಿಯುವವರ ಸಂಖ್ಯೆ ಸಾಕಷ್ಟಿದೆ.

Leave a Reply

Your email address will not be published. Required fields are marked *

error: Content is protected !!