ಉದಯವಾಹಿನಿ, ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಆಗಸ್ಟ್‌ 19 ರಂದು ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಿದೆ. ಭಾರತ ತಂಡದ ಮೊದಲ ಆಯ್ಕೆಯ ಆಟಗಾರರು ಲಭ್ಯರಿದ್ದಾರೆ. ಗಾಯದಿಂದ ಗುಣಮುಖರಾಗಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಆಯ್ಕೆಗೆ ಲಭ್ಯರಿದ್ದಾರೆ ಹಾಗೂ ತಂಡವನ್ನು ಮುನ್ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ಆಕಾಶ್‌ ಚೋಪ್ರಾ ಅವರು ಏಷ್ಯಾ ಕಪ್‌ ಟೂರ್ನಿಗೆ ತಮ್ಮದೇ ಭಾರತ ತಂಡವನ್ನು ಪ್ರಕಟಿಸಿದ್ದರು. ಇದೀಗ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಕೂಡ ಟೀಮ್‌ ಇಂಡಿಯಾವನ್ನು ಹೆಸರಿಸಿದ್ದಾರೆ.
ಮೊಹಮ್ಮದ್‌ ಕೈಫ್‌ ಅವರು ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಲ್ಲಿ ಕೆಲವೊಂದು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಭಯಾನಕ ಫಾರ್ಮ್‌ನಲ್ಲಿ ರನ್‌ ಹೊಳೆ ಹರಿಸಿದ್ದ ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರನ್ನು ಕೈಫ್‌ ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರನ್ನು ಕೂಡ ತಮ್ಮ ಪ್ಲೇಯಿಂಗ್‌ XIನಿಂದ ಕೈ ಬಿಟ್ಟಿದ್ದಾರೆ. ಅಂದ ಹಾಗೆ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಪರ ವರುಣ್‌ ಚಕ್ರವರ್ತಿ ಮೂರು ಪಂದ್ಯಗಳಿಂದ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸಂಜು ಸ್ಯಾಮ್ಸನ್‌-ಅಭಿಷೇಕ್‌ ಶರ್ಮಾ ಓಪನರ್ಸ್‌: ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಅವರನ್ನು ಕೈಫ್‌ ಆರಿಸಿದ್ದಾರೆ. ಮೂರನೇ ಕ್ರಮಾಂಕಕ್ಕೆ ಸೂರ್ಯಕುಮಾರ್‌ ಯಾದವ್‌ ಆಯ್ಕೆಯಾದರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ ಸ್ಥಾನವನ್ನು ನೀಡಲಾಗಿದೆ. ಇನ್ನು ಉಪ ನಾಯಕನಾಗಿ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ಸ್ಥಾನವನ್ನು ಕಲ್ಪಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಕಳೆದ ಟಿ20ಐ ಸರಣಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಅಕ್ಷರ್‌ ಪಟೇಲ್‌ ಉಪ ನಾಯಕನಾಗಿ ನೆರವು ನೀಡಿದ್ದರು. ಶುಭಮನ್‌ ಗಿಲ್‌ ಅನುಪಸ್ಥಿತಿಯಲ್ಲಿ ಅಕ್ಷರ್‌ಗೆ ಉಪ ನಾಯಕನ ಜವಾಬ್ದಾರಿ ನೀಡಲಾಗಿತ್ತು. ಅಂದ ಹಾಗೆ ಭಾರತ ವೈಟ್‌ ಬಾಲ್‌ ತಂಡಗಳಿಗೆ ಶುಭಮನ್‌ ಗಿಲ್‌ ಅವರನ್ನು ಉಪ ನಾಯಕನನ್ನಾಗಿ ನೇಮಿಸಲಾಗಿದೆ.

ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್‌ ಬುಮ್ರಾ, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಕೈಫ್ ತಂಡದ ಇತರ ಆಟಗಾರರಾಗಿದ್ದಾರೆ. ಶುಭಮನ್, ಸಿರಾಜ್, ಜಿತೇಶ್ ಮತ್ತು ಚಕ್ರವರ್ತಿ ಬೆಂಚ್‌ನಲ್ಲಿ ಉಳಿಯಲಿದ್ದಾರೆ.

ಭಾರತದ ಏಷ್ಯಾ ಕಪ್ ವೇಳಾಪಟ್ಟಿ
ಭಾರತ ತನ್ನ ಏಷ್ಯಾ ಕಪ್ ಅಭಿಯಾನವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆರಂಭಿಸಲಿದೆ. ನಂತರ ಸೆಪ್ಟೆಂಬರ್ 14 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಸೆಪ್ಟೆಂಬರ್ 19 ರಂದು ಭಾರತ ತನ್ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಒಮಾನ್ ವಿರುದ್ಧ ಸೆಣಸಲಿದೆ. ಭಾರತ ಮತ್ತು ಪಾಕಿಸ್ತಾನ ಈ ಬಾರಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಎಸಿಸಿ ಈವೆಂಟ್‌ನ ಫೈನಲ್ ಸೆಪ್ಟೆಂಬರ್ 28 ರಂದು ನಡೆಯಲಿದೆ. ಬಿಸಿಸಿಐ ಏಷ್ಯಾ ಕಪ್‌ ಟೂರ್ನಿಯ ಆತಿಥ್ಯವನ್ನು ವಹಿಸಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!