ಉದಯವಾಹಿನಿ, ವಾಷಿಂಗ್ಟನ್: ಫೇಸ್‌ಬುಕ್‌ನ ನೇರ ಪ್ರಸಾರದಲ್ಲಿದ್ದ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ಆತನ ಅಂತಿಮ ಕ್ಷಣಗಳನ್ನು ಸೆರೆಹಿಡಿಯಲಾಗಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಹೌದು, 42 ವರ್ಷದ ವ್ಯಕ್ತಿಯೊಬ್ಬರು ಫೇಸ್‍ಬುಕ್‍ನಲ್ಲಿ ನೇರಪ್ರಸಾರ ಮಾಡುತ್ತಿದ್ದ ವೇಳೆ ಕೊಲ್ಲಲ್ಪಟ್ಟಿದ್ದಾರೆ. ಅಮೆರಿಕದ (America) ಚಿಕಾಗೊದ ಸೌತ್ ಆಸ್ಟಿನ್‌ನಲ್ಲಿ ಈ ಘಟನೆ ನಡೆದಿದ್ದು, ಚಿಕಾಗೊ ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ 42 ವರ್ಷದ ಕೆವಿನ್ ವ್ಯಾಟ್ಸನ್ ಎಂಬುವವರು ಕಾರಿನಲ್ಲಿ ಕುಳಿತು ಫೇಸ್‍ಬುಕ್‍ನಲ್ಲಿ ನೇರಪ್ರಸಾರ ಕೈಗೊಂಡಿದ್ದರು. ಈ ವೇಳೆ ಅವರನ್ನು ಯಾರೋ ಕೆಳಗಿಳಿಯುವಂತೆ ಹೇಳಿದ್ದಾರೆ. ಕೆಲವು ಸೆಕೆಂಡುಗಳ ನಂತರ ಗುಂಡಿನ ಸದ್ದು ಕೇಳಿ ಬಂದಿದೆ. ದುಷ್ಕರ್ಮಿಗಳು ವ್ಯಾಟ್ಸನ್ ಅವರಿಗೆ ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಆಸ್ಟಿನ್‌ನ ವೆಸ್ಟ್ ಮ್ಯಾಡಿಸನ್ ಸ್ಟ್ರೀಟ್‌ನ 5000 ಬ್ಲಾಕ್‌ನಲ್ಲಿ ಆಗಸ್ಟ್ 13ರ ಸಂಜೆ 6:14ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಚಿಕಾಗೊ ಪೊಲೀಸರು ವರದಿ ಮಾಡಿದ್ದಾರೆ. ವ್ಯಾಟ್ಸನ್ ಕಾರಿನಲ್ಲಿ ಕುಳಿತಿದ್ದಾಗ ಮತ್ತೊಂದು ವಾಹನ ಸಮೀಪಿಸುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಲು ಪ್ರಾರಂಭಿಸಿದರು. ವ್ಯಾಟ್ಸನ್ ಅವರ ಅಂತಿಮ ಕ್ಷಣಗಳನ್ನು ಫೇಸ್‌ಬುಕ್ ಲೈವ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ.
