ಉದಯವಾಹಿನಿ , ದುಬೈ: ವಾಯುನೆಲೆಯ ಸಮೀಪದಲ್ಲಿರುವ ಸೌಲಭ್ಯಗಳ ಮೇಲೆ ನಡೆದ ಡೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ವರದಿಯಾಗಿದೆ.
ದಾಳಿಯಿಂದ ಇಂಧನ ಟ್ಯಾಂಕ್ ಗಳಿಗೆ ಹಾನಿಯಾಗಿದ್ದು, ತುರ್ತು ಸೇವಾ ತಂಡಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ.
ಈ ಹಿನ್ನೆಲೆಯಲ್ಲಿ ಹಲವು ವಿಮಾನಗಳನ್ನು ವಿಮಾನ ನಿಲ್ದಾಣದ ಹೊರವಲಯದಲ್ಲಿ ಸುತ್ತುವಂತೆ ಮಾಡಲಾಗಿದ್ದು, ಕೆಲ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ. ದುಬೈನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ಪ್ರಮುಖ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ದೃಢಪಡಿಸಿದೆ.
ಇದೇ ವೇಳೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಘಟನೆಯ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಬಂಧಿಸಲಾದ 35 ಮಂದಿಯಲ್ಲಿ 19 ಭಾರತೀಯರು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಸಂಭವಿಸಿದ ಮತ್ತೊಂದು ದಾಳಿಯಿಂದ ಉಂಟಾದ ಸಣ್ಣ ಮಟ್ಟದ ಅಡಚಣೆಯ ಬಳಿಕ ಮತ್ತೆ ಈ ರೀತಿಯ ಘಟನೆ ಸಂಭವಿಸಿರುವುದು ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ.

Leave a Reply

Your email address will not be published. Required fields are marked *

error: Content is protected !!