ಉದಯವಾಹಿನಿ, ಇಸ್ಲಾಮಾಬಾದ್‌: ಭಯೋತ್ಪಾದನೆ ನಮ್ಮ ದೇಶದಲ್ಲಿ ಇಲ್ಲ ಎಂದೇ ವಾದಿಸುತ್ತಿರುವ ಪಾಕಿಸ್ತಾನದ ಬಣ್ಣ ಪದೇ ಪದೆ ಬಯಲಾಗುತ್ತಲೇ ಇದೆ. ಇದಕ್ಕೆ ಇದೀಗ ಇನ್ನೊಂದು ಸಾಕ್ಷಿ ಲಭ್ಯವಾಗಿದೆ. ಭಾರತೀಯ ಸೇನೆ ನಡೆಸಿರುವ ಅಪರೇಷನ್ ಸಿಂದೂರ್‌ನಲ್ಲಿ ಮೃತಪಟ್ಟ ಭಯೋತ್ಪಾದಕನಿಗೆ ಉನ್ನತ ಮಟ್ಟದ ಗೌರವ ನೀಡಿರುವ ಛಾಯಾಚಿತ್ರವೊಂದು ವೈರಲ್ ಆಗಿದೆ. ಕಳೆದ ಮೇ ತಿಂಗಳಲ್ಲಿ ಭಾರತೀಯ ಸೇನೆಯು ನಡೆಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟ ಲಷ್ಕರ್ ಭಯೋತ್ಪಾದಕನ ಸಮಾಧಿಗೆ ಪಾಕಿಸ್ತಾನದ ಉನ್ನತ ಸೇನಾ ಅಧಿಕಾರಿ ಮತ್ತು ಮಂತ್ರಿಗಳು ಗೌರವ ಸಲ್ಲಿಸುತ್ತಿರುವುದನ್ನು ಇದರಲ್ಲಿ ಕಾಣಬಹುದು.

ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 14ರಂದು ಲಾಹೋರ್ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ರಾವ್ ಇಮ್ರಾನ್ ಸರ್ತಾಜ್, ಫೆಡರಲ್ ಸಚಿವ ಮಲಿಕ್ ರಶೀದ್ ಅಹ್ಮದ್ ಖಾನ್, ಜಿಲ್ಲಾ ಪೊಲೀಸ್ ಅಧಿಕಾರಿ ಕಸೂರ್ ಮುಹಮ್ಮದ್ ಇಸಾ ಖಾನ್ ಮತ್ತು ಉಪ ಆಯುಕ್ತ ಇಮ್ರಾನ್ ಅಲಿ ಮತ್ತಿತರರು ಭಯೋತ್ಪಾದಕ ಮುದಾಸಿರ್ ಅಹ್ಮದ್‌ನ ಮುರಿಡ್ಕೆಯಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.

ಎಲ್‌ಇಟಿ ಕಾರ್ಯಕರ್ತನಾಗಿದ್ದ ಮುದಾಸಿರ್ 1999ರ ಐಸಿ -814 ವಿಮಾನ ಅಪಹರಣ ಮತ್ತು 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ. ಪಹಲ್ಗಾಮ್‌ನ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪ್ರಾರಂಭಿಸಿದ ಅಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಎಲ್‌ಇಟಿ ಪ್ರಧಾನ ಕಚೇರಿಯಾದ ಮರ್ಕಜ್ ತೈಬಾದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಮುದಾಸಿರ್ ಕೂಡ ಒಬ್ಬನಾಗಿದ್ದಾನೆ. ಮುದಾಸಿರ್ ಅಹ್ಮದ್ ಭಾರತದ ವಿರುದ್ಧ ಭಯೋತ್ಪಾದನೆ ಸಂಚು ರೂಪಿಸಿದ್ದ.

Leave a Reply

Your email address will not be published. Required fields are marked *

error: Content is protected !!