
ಉದಯವಾಹಿನಿ, ಚಾಮರಾಜನಗರ: ಧರ್ಮಸ್ಥಳ ಪ್ರಕರಣದ ಬಗ್ಗೆ ನಾಳೆ (ಸೋಮವಾರ) ಸದನದಲ್ಲಿ ಸಂಪೂರ್ಣ ಉತ್ತರ ನೀಡುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿ ಧರ್ಮಸ್ಥಳ ಚಲೋ ನಡೆಸಿರುವ ಬಗ್ಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾರೂ ಸಹ ರಾಜಕಾರಣ ಮಾಡಬಾರದು. ಧರ್ಮಸ್ಥಳ ಪ್ರಕರಣ ನ್ಯಾಯಕ್ಕೆ ಹಾಗೂ ಕಾನೂನಿಗೆ ಸಂಬಂಧಿಸಿದ ವಿಚಾರವಾಗಿದೆ. ಯಾವುದೇ ವ್ಯಕ್ತಿ ಕಂಪ್ಲೆಂಟ್ ಕೊಟ್ಟರೆ ಪೋಲಿಸರು ಎಫ್‌ಐಆರ್ ಹಾಕಿ ತನಿಖೆ ಮಾಡುತ್ತಾರೆ. ತಪ್ಪು ಕಂಡು ಬಂದರೆ ಮಾತ್ರ ಕೇಸ್ ಮುಂದುವರಿಸುತ್ತಾರೆ ಎಂದರು. ಇದು ಅಷ್ಟಕ್ಕೇ ಸೀಮಿತವಾಗಬೇಕೆ ವಿನಃ ರಾಜಕೀಯ ಮಾಡಬಾರದು. ಇದರಲ್ಲಿ ಧಾರ್ಮಿಕ ವಿಚಾರ ಎಳೆದು ತರೋದು ಸರಿಯಲ್ಲ. ಎಸ್‌ಐಟಿ ತನಿಖೆ ಪೂರ್ಣಗೊಳ್ಳಲು ಬಿಡಬೇಕು, ಸತ್ಯಾಸತ್ಯತೆ ಗೊತ್ತಾಗುತ್ತೆ. ಮಧ್ಯಂತರ ವರದಿ ಕೊಡಬೇಕಾ, ಅಂತಿಮ ವರದಿ ಕೊಡಬೇಕಾ ಎಂಬುದು ಎಸ್‌ಐಟಿಗೆ ಬಿಟ್ಟ ವಿಚಾರ. ಸರ್ಕಾರ ಅವರಿಗೆ ಯಾವುದೇ ನಿರ್ದೇಶನ ಕೊಡಲ್ಲ. ಎಸ್‌ಐಟಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ತಿಳಿಸಿದರು.
