ಉದಯವಾಹಿನಿ, ಬಳ್ಳಾರಿ: ಮಲೆನಾಡು ಸೇರಿದಂತೆ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬಾರಿ ಮಳೆಯಾಗುತ್ತಿರುವ (Rain) ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯಕ್ಕೆ 75,500 ಕ್ಯೂಸೆಕ್ ಒಳಹರಿವು ಇರೋದ್ರಿಂದ, ಜಲಾಶಯದಿಂದ 86,631 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 77 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ ಕೊಚ್ಚಿ ಹೋಗಿದ್ದ 19ನೇ ಗೇಟ್‌ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡಿರೋದ್ರಿಂದ ಮುಂಜಾಗ್ರತಾ ಕ್ರಮವಾಗಿ 80 ಟಿಎಂಸಿ ನೀರು ಮಾತ್ರ ಶೇಖರಿಸಿಟ್ಟುಕೊಳ್ಳಲು ಟಿಬಿ ಬೋರ್ಡ್ ತೀರ್ಮಾನಿಸಿದೆ. ತುಂಗಾ, ಭದ್ರಾ ಹಾಗೂ ವರದಾ ನದಿಗಳಿಂದ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಸಂಜೆ ವೇಳೆಗೆ 1 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
1 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಟ್ಟರೆ ಹಂಪಿಯ ಕೆಲ ಸ್ಮಾರಕಗಳು ಮುಳುಗಡೆಯಾಗಲಿವೆ. ಅಲ್ಲದೇ ಬಳ್ಳಾರಿ- ಗಂಗಾವತಿ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಕೂಡಾ ಮುಳುಗಡೆಯ ಭೀತಿಯಲ್ಲಿದೆ. ಇನ್ನೂ ನದಿಗೆ ಹೆಚ್ಚಿನ ಪ್ರಮಾಣದ ನೀರು ರಿಲೀಸ್ ಮಾಡಿದ್ರೆ ಪ್ರವಾಹ ಎದುರಾಗುವ ಆತಂಕ ಶುರುವಾಗಿದೆ. ಪ್ರವಾಹದ ಭೀತಿ ಎದುರಾಗಿರೋದ್ರಿಂದ ನದಿ ತೀರಕ್ಕೆ ಜನ ಜಾನುವಾರು ತೆರಳದಂತೆ ಟಿಬಿ ಬೋರ್ಡ್ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
