ಉದಯವಾಹಿನಿ, ಬೆಂಗಳೂರು: ತಾನು ನೆಟ್ಟಿದ್ದ ಇನ್ನೂರಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ತೆರವು ಮಾಡಿದ್ದಾರೆಂದು ಆರೋಪಿಸಿ ಬೇಲೂರು ತಹಶೀಲ್ದಾರ್ ವಿರುದ್ಧ ಗೃಹಸಚಿವ ಪರಮೇಶ್ವರ್ ಅವರಿಗೆ ಸಾಲು ಮರದ ತಿಮ್ಮಕ್ಕ ದೂರು ನೀಡಿದ್ದಾರೆ.
ಹಾಸನದ ಬೇಲೂರು ತಾಲೂಕು ಕಚೇರಿ ಹಿಂಭಾಗದಲ್ಲಿ ಸಾಲು ಮರದ ತಿಮ್ಮಕ್ಕ ನೆಟ್ಟಿದ್ದ ಮರಗಳನ್ನು ಕಡಿದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ತೆರವು ಮಾಡಿದ್ದಾರೆ ಎಂದು ಬೇಲೂರು ತಾಲೂಕು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ತಹಶೀಲ್ದಾರ್ ವಿರುದ್ಧ ಗೃಹ ಸಚಿವರಿಗೆ ಸಾಲು ಮರದ ತಿಮ್ಮಕ್ಕ ದೂರು ಕೊಟ್ಟಿದ್ದಾರೆ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಅವರ ಪರಿಸರ ಪ್ರೇಮವನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರು ರಸ್ತೆ ಬದಿಯಲ್ಲಿ ನೂರಾರು ಮರಗಳನ್ನು ನೆಟ್ಟು, ಅವುಗಳಿಗೆ ನೀರುಣಿಸಿ ಪೋಷಿಸಿ ವೃಕ್ಷಮಾತೆಯೆಂದೇ ಖ್ಯಾತಿಗಳಿಸಿದ್ದರು. ಮಕ್ಕಳು ಇಲ್ಲವೆನ್ನುವ ಕಾರಣಕ್ಕೆ ರಸ್ತೆ ಬದಿಯ ಆಲದ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಬೆಳೆಸಿ, ಪೋಷಿಸಿ ಪರಿಸರ ಉಳಿಸಿ ಎಂದು ಲೋಕಕ್ಕೆ ಸಾರಿದ್ದಾರೆ.
