ಉದಯವಾಹಿನಿ, ಜಾರ್ಖಂಡ್: ವೈದ್ಯರ ಚೇಂಬರ್ ಗೆ ಬರುವುದಕ್ಕೂ ಮುನ್ನ ಶೂ ಕಳಚಿ ಒಳ ಪ್ರವೇಶಿಸುವಂತೆ ಡಿ ಆರ್ ಎಂ ಪತ್ನಿಗೆ ಕೇಳಿದ ಆಸ್ಪತ್ರೆಯ ಸಿಬ್ಬಂದಿಯನ್ನು ಅರೆನಗ್ನಗೊಳಿಸಿ ಮನೆಗೆ ಕಳಿಸಿರುವ ವಿಕೃತ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ. ಧನ್ಬಾದ್ ನಲ್ಲಿರುವ ವಿಭಾಗೀಯ ರೈಲು ವ್ಯವಸ್ಥಾಪಕರ ಚೇಂಬರ್ ನಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಬಟ್ಟೆಯನ್ನು ಕಳಚಿಸಿ ಅರೆನಗ್ನಗೊಳಿಸಿ ಮನೆಗೆ ಕಳಿಸಲಾಗಿದೆ. ಘಟನೆಯಿಂದ ಅಘಾತಕ್ಕೆ ಒಳಗಾದ ಆಸ್ಪತ್ರೆಯ ಸಿಬ್ಬಂದಿ ಬಸಂತ್ ಉಪಾಧ್ಯಾಯ ಖಿನ್ನತೆಗೆ ಜಾರಿದ್ದು, ವಿಭಾಗೀಯ ರೈಲ್ವೆ ಆಸ್ಪತ್ರೆಗೆ ದಾಖಲಾಗಿದ್ದರು ನಂತರ ಅವರನ್ನು ಅಸರ್ಫಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತ ವ್ಯಕ್ತಿ ಉಪಾಧ್ಯಾಯ ಆಸ್ಪತ್ರೆಗೆ ದಾಖಲಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ತಮ್ಮ ಕೊಠಡಿಯೊಳಗೆ ಶೂ ಧರಿಸಿ ಬರಲು ಯಾರಿಗೂ ಅವಕಾಶ ನೀಡದಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಆದರೆ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಡಿಆರ್ ಎಂ ಪತ್ನಿ ಬಂದಿದ್ದರು. ಬಸಂತ್ ಉಪಾಧ್ಯಾಯ ಆ ಮಹಿಳೆಗೆ ಶೂ ಕಳಚಿ ಒಳ ಪ್ರವೇಶಿಸುವಂತೆ ಕೇಳಿದ್ದರು. ಆದರೆ ಮಹಿಳೆ ಶೂ ಧರಿಸಿಯೇ ಒಳ ತೆರಳಿದರು. ಇದಾದ ಬಳಿಕ ಡಿಆರ್ ಎಂ ಸಿಎಂಎಸ್ ರಿಗೆ ಬಸಂತ್ ಉಪಾಧ್ಯಾಯ ಅವರನ್ನು ಕರೆತರುವಂತೆ ಸೂಚಿಸಿ, ಉಪಾಧ್ಯಾಯ ಜೊತೆಗೆ ಅವರ ವಾಹನದಲ್ಲಿ ತೆರಳಿದರು ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಸಿಎಂಎಸ್ ಹಾಗೂ ಉಪಾಧ್ಯಾಯ ಇಬ್ಬರೂ ಡಿಆರ್ ಎಂ ಚೇಂಬರ್ ಒಳಗೆ ಹೋದರು. ಅಲ್ಲಿ ಡಿಆರ್ ಎಂ ತಮ್ಮ ಪತ್ನಿಯನ್ನು ವೈದ್ಯರ ಕೊಠಡಿಗೆ ಪ್ರವೇಶಿಸಲು ತಡೆದಿದ್ದಕ್ಕಾಗಿ ಉಪಾಧ್ಯಾಯನನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲ ಉಪಾಧ್ಯಾಯನನ್ನು ಅರೆನಗ್ನಗೊಳಿಸಿ ಮನೆಗೆ ಕಳಿಸಿದ್ದಾರೆ.
