ಉದಯವಾಹಿನಿ, ನವದೆಹಲಿ: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು ಬಂಧನಕ್ಕೊಳಗಾದರೆ, ಅವರನ್ನು ಪದಚ್ಯುತಗೊಳಿಸುವ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆ- 2025 ಅನ್ನು ಮಂಡಿಸಿ ಈ ಮೂರೂ ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.ಮೂರು ಮಸೂದೆಗಳ ಮಂಡನೆ ಬೆನ್ನಲ್ಲೇ ಲೋಕಸಭೆಯಲ್ಲಿ (Lok Sabha) ಕೋಲಾಹಲ ಸೃಷ್ಟಿಯಾಯಿತು. ವಿರೋಧ ಪಕ್ಷದ ನಾಯಕರು ಮಸೂದೆಯ ಪ್ರತಿಗಳನ್ನು ಹರಿದು ಅಮಿತ್ ಶಾ ಕಡೆಗೆ ಎಸೆದರು. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ವಿರೋಧ ಪಕ್ಷಗಳ ವರ್ತನೆಗೆ ಸ್ಪೀಕರ್ ಓಂ ಬಿರ್ಲಾ ಆಕ್ರೋಶ ಹೊರ ಹಾಕಿದರು.
ಅಮಿತ್ ಶಾ ಅವರನ್ನು ಬಂಧಿಸಿದಾಗ ಅವರು ತಮ್ಮ ನೈತಿಕತೆಯನ್ನು ಪ್ರದರ್ಶಿಸಿದ್ದಾರೆಯೇ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನನ್ನ ವಿರುದ್ಧ ಆರೋಪಗಳು ಕೇಳಿ ಬಂದಾಗ, ಬಂಧನಕ್ಕೂ ಮುನ್ನ ನಾನು ನೈತಿಕವಾಗಿ ರಾಜೀನಾಮೆ ನೀಡಿದ್ದೇನೆ. ನ್ಯಾಯಾಲಯದಿಂದ ನಾನು ನಿರಪರಾಧಿ ಎಂದು ಸಾಬೀತಾಗುವವರೆಗೆ ನಾನು ಯಾವುದೇ ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಂಡಿಲ್ಲ ಎಂದು ಹೇಳಿದರು.
