ಉದಯವಾಹಿನಿ, ಬೆಂಗಳೂರು: ಕೊಳವೆ ಬಾವಿಗಳ ನೀರಿಗೆ ಡಿಜಿಟಲ್ ಟೆಲಿಮೆಟ್ರಿ ಅಳವಡಿಕೆ, ವಾಣಿಜ್ಯ, ಕೈಗಾರಿಕೆ, ಗಣಿಗಾರಿಕೆ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಕೊಳವೆಬಾವಿ ನೀರಿಗೆ ಮತ್ತು ಟ್ಯಾಂಕರ್‌ಗಳಿಗೆ ಶುಲ್ಕ ವಿಧಿಸುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ನಿರ್ವಹಣೆಯ ನಿಯಮ ಹಾಗೂ ನಿಯಂತ್ರಣ) ಕಾಯ್ದೆ 2025ಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆಯಿತು. ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ವಿಧೇಯಕವನ್ನು ಸಣ್ಣ ನೀರಾವರಿ ಸಚಿವ ಬೋಸ್‌ರಾಜ್ ಅವರು ಮಂಡನೆ ಮಾಡಿದರು. ವಿಧೇಯಕದ ಮೇಲೆ ಮಾತನಾಡಿದ ಭೋಸರಾಜ್ ಅವರು, ಕೇಂದ್ರ ಸರ್ಕಾರದ ಕಾಯ್ದೆ ಇದು. 15 ರಾಜ್ಯಗಳು ಈಗಾಗಲೇ ಈ ಕಾಯ್ದೆ ಅನುಷ್ಠಾನ ಮಾಡಿವೆ. ಅಂತರ್ಜಲ ಅಭಿವೃದ್ಧಿಗೆ ಈ ವಿಧೇಯಕ ಸಹಕಾರಿಯಾಗಲಿದೆ. ಬೋರ್‌ವೆಲ್ ಕೊರೆಯಲು ಅನುಮತಿ ಪಡೆಯುವುದು ಈ ವಿಧೇಯಕದ ಪ್ರಮುಖ ಅಂಶವಾಗಿದೆ ಎಂದರು. ವಿಧಾನಸಭೆಯಲ್ಲಿ ಈ ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಗಿದೆ. ಪರಿಷತ್‌ನಲ್ಲೂ ಕೂಡ ಎಲ್ಲರೂ ಒಪ್ಪಿಗೆ ಕೊಡಬೇಕು ಎಂದು ಮನವಿ ಮಾಡಿದರು. ವಿಧೇಯಕದ ಮೇಲೆ ಸದಸ್ಯರಾದ ಐವಾನ್ ಡಿಸೋಜಾ, ಪಿ.ಎಚ್.ಪೂಜಾರ್, ಡಿ.ಎಸ್.ಅರುಣ್, ಗೋವಿಂದರಾಜು, ಟಿ.ಎ.ಶರವಣ, ಮಂಜೇಗೌಡ, ಭಾರತಿ ಶೆಟ್ಟಿ, ಡಿ.ಟಿ.ಶ್ರೀನಿವಾಸ್, ಉಮಾಶ್ರೀ , ಬಲ್ಕಿಶ್ ಬಾನು, ಹೇಮಲತಾ ನಾಯಕ್, ರವಿಕುಮಾರ್ ಮತ್ತಿತರರು ಮಾತನಾಡಿದರು.
ಕಾಂಗ್ರೆಸ್‌ನ ಐವಾನ್ ಡಿಸೋಜಾ ಮಾತನಾಡಿ, ಅಪಾರ್ಟೆಂಟ್‌ನಲ್ಲಿ ನೀರಿನಲ್ಲಿ ವಿಚಾರವಾಗಿ ದೊಡ್ಡ ದಂಧೆ ನಡೆಯುತ್ತಿದೆ. ಅಪಾರ್ಟೆಂಟ್ ನಲ್ಲಿ ಬೋರ್‌ವೆಲ್ ಕೊರೆಸುವುದಕ್ಕೆ ಷರತ್ತುಗಳನ್ನು ವಿಧಿಸುವುದು ಸರಿಯಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಸಾಕಷ್ಟು ಮನೆಗಳಿರುತ್ತವೆೆ. ಹೀಗಾಗಿ ಅಪಾರ್ಟೆಂಟ್‌ಗೆ ವಿಧೇಯಕದಲ್ಲಿರುವ ಇರುವ ನಿಯಮ ಸರಿ ಮಾಡಬೇಕು. ಅಂತರ್ಜಲವೃದ್ಧಿಗೆ ಈ ವಿಧೇಯಕ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೆಡಿಎಸ್‌ನ ಗೋವಿಂದರಾಜು ಮಾತನಾಡಿ, ಮಳೆ ನೀರು ಕೊಯ್ಲು ಪದ್ದತಿ ಮನೆಗಳಿಗೆ ಕಡ್ಡಾಯ ಮಾಡಿರೋದು ಸರಿ ಇದೆ. ಅಂತರ್ಜಲ ಹೆಚ್ಚಳಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಮಳೆ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಸರ್ಕಾರವೇ ಸರಿಯಾಗಿ ನೀರು ಕೊಟ್ಟರೇ ಜನ ಯಾರೂ ಬೋರ್‌ವೆಲ್ ಕೊರೆಸಲು ಹೋಗುವುದಿಲ್ಲ. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲು ಅನುಮತಿ ಪಡೆಯಬೇಕು ಎಂಬುದು ಸರಿಯಲ್ಲ. ಸರ್ಕಾರ ಈ ನಿಯಮವನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
