ಉದಯವಾಹಿನಿ, ನವದೆಹಲಿ: ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ (Supreme Court) ನೀಡಿರುವ ಆದೇಶದ ವಿರುದ್ಧ ಪ್ರಾಣಿ ಹಕ್ಕುಗಳ ಹೋರಾಟಗಾರರು ರಾಷ್ಟ್ರ ರಾಜಧಾನಿಯಲ್ಲಿ ರ್ಯಾಲಿಗಳನ್ನು ನಡೆಸುತ್ತಲೇ ಇದ್ದಾರೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ನೇತೃತ್ವದ ವಿಭಾಗೀಯ ಪೀಠವು, ದೆಹಲಿ-ಎನ್‌ಸಿಆರ್ ಅಧಿಕಾರಿಗಳಿಗೆ ಆರರಿಂದ ಎಂಟು ವಾರಗಳೊಳಗೆ ಬೀದಿ ನಾಯಿಗಳನ್ನು (stray dogs) ಹಿಡಿಯಬೇಕು ಮತ್ತು ಅವುಗಳಿಗೆ ಆಶ್ರಯ ತಾಣ ಒದಗಿಸಬೇಕು. ಅವುಗಳನ್ನು ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬಿಡದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನ ಈ ಆದೇಶವು ಪ್ರಾಣಿ ಹಕ್ಕುಗಳ ಹೋರಾಟಗಾರರು ಹಾಗೂ ಪ್ರಾಣಿ ಪ್ರಿಯರಲ್ಲಿ ಅಸಮಾಧಾನ ತರಿಸಿದೆ. ಹೀಗಾಗಿ ದೇಶದ ರಾಜಧಾನಿಯಲ್ಲಿ ಬೀದಿನಾಯಿಗಳನ್ನು ಸ್ಥಳಾಂತರಿಸುವ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಪ್ರತಿಭಟನಾಕಾರರು ರ್ಯಾಲಿಯ ಸಮಯದಲ್ಲಿ ಪ್ರೀತಿಯಿಂದ ಬೀದಿ ನಾಯಿಯನ್ನು ತೋಳುಗಳಲ್ಲಿ ಹೊತ್ತುಕೊಂಡು ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಪ್ರಾಣಿ ಪ್ರಿಯರು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಫಲಕಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಒಂದು ಫಲಕದಲ್ಲಿ ‘ಶ್ವಾನಗಳಿಗೆ ಲಸಿಕೆ ಹಾಕಿಸಿ, ಸ್ಥಳಾಂತರ ಮಾಡಬೇಡಿ’ ಎಂದು ಬರೆಯಲಾಗಿದೆ. ಇನ್ನೊಂದು ಫಲಕದಲ್ಲಿ ‘ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಬರೆಯಲಾಗಿದೆ. ಈ ವೇಳೆ ಕೆಲವರು ಬೀದಿನಾಯಿಯೊಂದನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡು ನೃತ್ಯ ಮಾಡಿದ್ದಾರೆ. ಶ್ವಾನ ಕೂಡ ಭಯಪಡದೆ ಅವರ ತೋಳುಗಳಲ್ಲಿ ಸುಮ್ಮನೆ ಕೂತಿದೆ.
