ಉದಯವಾಹಿನಿ, ಬೆಂಗಳೂರು: ಸಾರಿಗೆ ಹಾಗೂ ಮುಜರಾಯಿ ಸಚಿವರು ಏಕ ಸದಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ಎಂ.ಆರ್ ಶ್ರೀನಿವಾಸಮೂರ್ತಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳೊಡನೆ, ಕೆ ಎಸ್ ಆರ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ಸಭೆ ನಡೆಸಿದರು. ಅಧ್ಯಕ್ಷರು ಏಕ ಸದಸ್ಯ ಸಮಿತಿಯವರು ಸಚಿವರಿಗೆ ಈಗಾಗಲೇ ಸಲ್ಲಿಕೆಯಾಗಿರುವ ವರದಿಯ ಪ್ರತಿಯನ್ನು ನೀಡಿ, ವರದಿಯ ಪ್ರಮುಖ ಅಂಶಗಳನ್ನು ಸಂಕ್ಷಿಪ್ತ ಪ್ರಾತ್ಯಕ್ಷಿತೆಯ ಮೂಲಕ ವಿವರಿಸಿದರು. ಹಾಗೂ ಇತ್ತೀಚೆಗೆ ಘನ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆಗೆ ಬಲ ನೀಡಿದಂತಾಗಿದೆ. ಈ ಯೋಜನೆ ಜಾರಿಗೆ ಮೊದಲು ಸಾರಿಗೆ ಸಂಸ್ಥೆಗಳ ಒಟ್ಟು ಪ್ರಯಾಣಿಕರ ಸಂಖ್ಯೆ ಪ್ರತಿದಿನ ಸರಾಸರಿ 84.15 ಲಕ್ಷಗಳಿದ್ದು, ಇಂದು ಸರಾಸರಿ 1 ಕೋಟಿ 5 ಲಕ್ಷಗಳಾಗಿರುವುದು ಶಕ್ತಿ ಯೋಜನೆ ಯಶಸ್ವಿಯಾಗಿದೆಯೆಂದು ತಿಳಿಸಿದರು. ಮುಂದುವರಿದ ದೇಶಗಳಲ್ಲಿ ಸಹ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಲು ಹಲವು ಮಹತ್ತರ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗೆಗಿನ ಮಾಹಿತಿಯನ್ನು ಹಂಚಿಕೊಂಡರು.
ನಂತರ ಮಾತನಾಡಿದ ಮಾನ್ಯ ಸಚಿವರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕೆ ಅನುಕೂಲವಾಗುವ ತುರ್ತು ಕ್ರಮಗಳಾದ ಹೊಸ ಬಸ್ಸುಗಳ ಸೇರ್ಪಡೆ, ಬಸ್ಸುಗಳ ಪುನಶ್ಚೇತನ ಕಾರ್ಯ, ಪರಿಣಾಮಕಾರಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕ ಸ್ನೇಹಿ ಉಪಕ್ರಮಗಳು, ಸಿಬ್ಬಂದಿಗಳ ನೇಮಕ ಇತರೆ ವಿಷಯಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು. ಹಾಗೆಯೇ ಸಂಪನ್ಮೂಲ ನಗದೀಕರಣದ ಬಗ್ಗೆ ಕೂಡಲೇ ಕ್ರಿಯಾ ಯೋಜನೆಯನ್ನು ತಯಾರಿಸಿ, ನಾಲ್ಕು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ವಾಣಿಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ ಕೂಡಲೇ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಸೂಚಿಸಿದರು.
