ಉದಯವಾಹಿನಿ, ನವದೆಹಲಿ: ‘ಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ ಅಥವಾ 50 ರೂ. ಪಡೆಯಿರಿ’ ಹೀಗೆ ಆಫರ್ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ‘ರಾಪಿಡೋ’ (Rapido) ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 10 ಲಕ್ಷ ರೂ. ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಇಂಥ ಮೋಸದ ಜಾಹೀರಾತು ನೀಡುವಂಥ ಸಂಸ್ಥೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದೆ.
ಸದಾ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾರಣಕ್ಕೆ ರಾಪಿಡೋ ಸಂಸ್ಥೆ ವಿರುದ್ಧ ಅತ್ಯಧಿಕ ದೂರುಗಳು ಬಂದಿದ್ದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆಗಿಳಿದ ಸಿಸಿಪಿಎ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದು, ತಕ್ಷಣದಿಂದಲೇ ಇಂಥ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಆದೇಶ ಸಹ ನೀಡಿದೆ. ಗ್ರಾಹಕರ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಜನರ ದಾರಿ ತಪ್ಪಿಸುವ ಜಾಹೀರಾತು ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಅನುಸರಿಸುತ್ತಿದ್ದ ಕಾರಣಕ್ಕೆ ರಾಪಿಡೋ ಟ್ರಾನ್ಸ್ಪೋರ್ಟೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ 10 ಲಕ್ಷ ರೂ. ದಂಡ ವಿಧಿಸಿದೆ.
ಮೋಸದ ಜಾಹೀರಾತು ನಿಲ್ಲಿಸಲು ರಾಪಿಡೋಗೆ ಸ್ಪಷ್ಟ ನಿರ್ದೇಶನ: ‘5 ನಿಮಿಷದಲ್ಲಿ ಆಟೋ ಸೇವೆ ಅಥವಾ 50 ರೂ. ಪಡೆಯಿರಿ’ ಹಾಗೂ ‘ಗ್ಯಾರಂಟಿ ಆಟೋ’ ಎಂದೆಲ್ಲಾ ಭರವಸೆ ನೀಡುತ್ತಿದ್ದ ರಾಪಿಡೋ ಜಾಹೀರಾತು ಮತ್ತು ಸಂಬಂಧಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಪಿಎ ಇದೊಂದು ಮೋಸದ ಜಾಹೀರಾತು ಎಂಬುದನ್ನು ಖಚಿತಪಡಿಸಿಕೊಂಡಿದೆ. ಈ ಜಾಹೀರಾತು ವಂಚನೆಯಿಂದ ಕೂಡಿದ್ದು, ಜನರ ದಾರಿ ತಪ್ಪಿಸುವುದಾಗಿದೆ. ಅಲ್ಲದೇ, ಗ್ರಾಹಕರನ್ನು ಮೋಸಗೊಳಿಸುವುದಾಗಿದೆ. ಹಾಗಾಗಿ ತಕ್ಷಣವೇ ಇದನ್ನು ನಿಲ್ಲಿಸುವಂತೆ ರಾಪಿಡೋಗೆ ಸ್ಪಷ್ಟ ನಿರ್ದೇಶನ ನೀಡಿದೆ.
