ಉದಯವಾಹಿನಿ, ಚೆನ್ನೈ; ಟಿವಿಕೆ ಪಕ್ಷ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ, ಡಿಎಂಕೆ (DMK) ಹಾಗೂ ಬಿಜೆಪಿ (DMK) ಯಾವ ಪಕ್ಷದ ಜೊತೆಗೂ ಕೈಜೋಡಿಸಲ್ಲ ಎಂದು ನಟ, ರಾಜಕಾರಣಿ ತಮಿಳಿಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಘೋಷಣೆ ಮಾಡಿದ್ದಾರೆ.
ಮಧುರೈ ಜಿಲ್ಲೆಯ ಪರಪತಿಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಡಿಎಂಕೆ ಹಾಗೂ ಬಿಜೆಪಿ ನಡುವೆ ಹೋರಾಡಲಿದೆ. ಡಿಎಂಕೆ ನಮಗೆ ರಾಜಕೀಯ ಬದ್ದ ವೈರಿ, ಬಿಜೆಪಿಯ ಜೊತೆಗೂ ಕೈಜೋಡಿಸಲ್ಲ. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ತಮಿಳುನಾಡಿನಲ್ಲಿರುವ 234 ಕ್ಷೇತ್ರಗಳಲ್ಲಿಯೂ ಟಿವಿಕೆ ಪಕ್ಷ ಸ್ಪರ್ಧಿಸಲಿದೆ. ನಾನು ಪೂರ್ವ ಮಧುರೈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಡಿಎಂಕೆ ಸರ್ಕಾರವು ಚುನಾವಣೆ ಪೂರ್ವದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
