ಉದಯವಾಹಿನಿ, ನ್ಯೂಯಾರ್ಕ್: ತಮ್ಮ ‘ಕಾಟ್ ಇನ್ ಪ್ರಾವಿಡೆನ್ಸ್’ ಎಂಬ ರಿಯಾಲಿಟಿ ಕೋರ್ಟ್ ಶೋ ಮೂಲಕ ಅಂತಾರಾಷ್ಟ್ರೀಯ ಜನಪ್ರಿಯತೆ ಪಡೆದಿದ್ದ ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ʼವಿಶ್ವದ ಅತ್ಯಂತ ಕರುಣಾಮಯಿ ನ್ಯಾಯಾಧೀಶʼ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದರು. ಕಾಯಿಲೆಯೊಂದಿಗೆ ಹಲವು ದಿನಗಳ ಹೋರಾಟದ ನಂತರ ಅವರ ಮರಣವನ್ನು ದೃಢಪಡಿಸಲಾಗಿದೆ.”ಅವರ ಸಹಾನುಭೂತಿ, ನಮ್ರತೆ ಮತ್ತು ಜನರ ಒಳ್ಳೆಯತನದ ಮೇಲಿನ ಅಚಲ ನಂಬಿಕೆಗಾಗಿ ನ್ಯಾಯಾಧೀಶ ಕ್ಯಾಪ್ರಿಯೊ, ನ್ಯಾಯಾಲಯದ ಕೋಣೆಯಲ್ಲಿ ಮತ್ತು ಅದರಾಚೆಗೂ ತಮ್ಮ ಕೆಲಸದ ಮೂಲಕ ಲಕ್ಷಾಂತರ ಜನರ ಜೀವನವನ್ನು ಮುಟ್ಟಿದರು. ಅವರ ವಾತ್ಸಲ್ಯ, ಹಾಸ್ಯ ಮತ್ತು ದಯೆ ಅವರನ್ನು ತಿಳಿದಿರುವ ಎಲ್ಲರ ಮೇಲೆ ಅಳಿಸಲಾಗದ ಗುರುತು ಬಿಟ್ಟಿದೆ” ಎಂದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅವರ ಸಾವಿಗೆ ಒಂದು ದಿನ ಮೊದಲು ತಾವು ಕ್ಯಾನ್ಸರ್ ವಿರುದ್ಧ ಹೋರಾಟವನ್ನು ಮುಂದುವರಿಸುತ್ತಿದ್ದೇವೆ ಎಂಬುದನ್ನು ಹಾಗೂ ಎಲ್ಲರೂ ತನಗಾಗಿ ಪ್ರಾರ್ಥಿಸಿ ಎಂದು ಕೋರುವ Instagram ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದರು. “ದುರದೃಷ್ಟವಶಾತ್, ಕಾಯಿಲೆಯಲ್ಲಿ ನನಗೆ ಹಿನ್ನಡೆಯಾಗಿದೆ ಮತ್ತು ನಾನು ಆಸ್ಪತ್ರೆಗೆ ಮರಳಿದ್ದೇನೆ. ನಾನು ಈ ಕಠಿಣ ಯುದ್ಧವನ್ನು ಮುಂದುವರಿಸುತ್ತಿದ್ದೇನೆ. ನಿಮ್ಮ ಪ್ರಾರ್ಥನೆಗಳು ನನ್ನ ಚೈತನ್ಯವನ್ನು ಹೆಚ್ಚಿಸುತ್ತವೆ. ನಾನು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ, ಹೆಚ್ಚೇನಲ್ಲ. ನಿಮ್ಮ ಪ್ರಾರ್ಥನೆಗಳಲ್ಲಿ ನನ್ನನ್ನು ನೆನಪಿಸಿಕೊಳ್ಳಿ. ನಾನು ಪ್ರಾರ್ಥನೆಯ ಶಕ್ತಿಯನ್ನು ತುಂಬಾ ನಂಬುವವನು” ಎಂದು ಅವರು ಪೋಸ್ಟ್‌ನಲ್ಲಿ ನುಡಿದಿದ್ದರು.
ನ್ಯಾಯಾಲಯದಲ್ಲಿ ಆರೋಪಿಗಳ ಮೇಲೆ ಅವರು ತೋರುತ್ತಿದ್ದ ಅಪಾರ ಸಹಾನುಭೂತಿಗಾಗಿ ಕ್ಯಾಪ್ರಿಯೊ ಅವರನ್ನು “ವಿಶ್ವದ ಅತ್ಯಂತ ಮೃದು ನ್ಯಾಯಾಧೀಶ” ಎಂದು ವರ್ಣಿಸಲಾಗುತ್ತಿತ್ತು. ಸಹಾನುಭೂತಿ ಮತ್ತು ಪ್ರೀತಿಯಿಂದ ಕೊಡಲ್ಪಡುತ್ತಿದ್ದ ಅವರ ತೀರ್ಪುಗಳು ಟಿವಿ, ಮೀಡಿಯಾ ಮೂಲಕ ಲಕ್ಷಾಂತರ ಜನರ ಹೃದಯ ಸ್ಪರ್ಶಿಸಿದ್ದವು. ಅವರ ನ್ಯಾಯಾಲಯದ ವಿಚಾರಣೆಗಳ ವಿಡಿಯೊಗಳು ವೈರಲ್ ಆಗುತ್ತಿದ್ದವು. ಸಂಕಷ್ಟದಲ್ಲಿರುವ ಕುಟುಂಬಗಳ ಆರೋಪಿಗಳಿಗೆ ನೀಡಲಾದ ದಂಡವನ್ನು ಅವರು ವಜಾ ಮಾಡುತ್ತಿದ್ದರು. ಪ್ರೋತ್ಸಾಹದ ಮಾತುಗಳನ್ನು ಆಡುತ್ತಿದ್ದರು. ಆನ್‌ಲೈನ್‌ನಲ್ಲಿ ನೂರು ಕೋಟಿಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಇವರ ವಿಡಿಯೊಗಳು ಕಂಡಿವೆ.
