ಉದಯವಾಹಿನಿ, ಬೆಂಗಳೂರು: ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳುವುದರಿಂದ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಸುಗಳು ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಗಳಿಗೆ ಕಾರ್ಯಾಚರಣೆ ನಡೆಸಲಿವೆ.
ಆ.22ರಂದು ಶುಕ್ರವಾರ, ಆ.23ರಂದು ಬೆನಕನ ಅಮವಾಸ್ಯೆ, ಆ.24ರಂದು ನಾಲ್ಕನೇ ಶನಿವಾರ, ಆ.25ರಂದು ಭಾನುವಾರ, ಆ.25ರಂದು ಸ್ವರ್ಣಗೌರಿ ವ್ರತ ಮತ್ತು ಆ.26ರಂದು ಗಣೇಶ ಹಬ್ಬ ಇರುವುದರಿಂದ ಸಾರ್ವಜನಿಕರು ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆ ಬಸ್‌ಗಳು ಕಾರ್ಯನಿರ್ವಹಿಸಲಿವೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 265 ಹೆಚ್ಚುವರಿ ವಿಶೇಷ ಸಾರಿಗೆ ಬಸ್ಸುಗಳು ಕಾರ್ಯನಿರ್ವಹಿಸಲಿವೆ. ಬೆಂಗಳೂರಿನಿಂದ ರಾಜ್ಯ/ಅಂತರರಾಜ್ಯ ವಿವಿಧ ಸ್ಥಳಗಳಿಗೆ ತೆರಳಲು ಆ.22ರಿಂದ ಆ.26ರವರೆಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಬ್ಬ ಮುಗಿದ ನಂತರ ಆ.27 ಹಾಗೂ ನಂತರ ದಿನಗಳಂದು ಪ್ರಮುಖ ಸ್ಥಳಗಳಿಗೆ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗುವುದು.
