ಉದಯವಾಹಿನಿ, ಮುಂಬೈ: ಮಹಾಮಳೆಗೆ ದೇಶದ ವಾಣಿಜ್ಯ ನಗರಿ ಮುಂಬೈ ಅಕ್ಷರಶಃ ಮುಳುಗಿದೆ. ಜನಜೀವನ ಸ್ತಬ್ಧಗೊಂಡಿದ್ದು, ಹಲವು ಮನೆಗಳು ನೀರಿನಲ್ಲಿ ಮುಳುಗಿವೆ. ಆದರೆ ಊರಿಗೆ ಊರೇ ಪ್ರವಾಹ ಆಗಿ ಮುಳುಗಿದರೂ, ನಮಗೆ ಚಿಂತೆಯಿಲ್ಲ ಎಂಬಂತೆ ಕುಳಿತಿರುವ ಈ ಇಬ್ಬರು ವ್ಯಕ್ತಿಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದಾರೆ, ನೆಟ್ಟಿಗರು ವಿಡಿಯೊ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.
ಹೌದು, ಅಂಥದ್ದೇನಿದೆ ಈ ವಿಡಿಯೊದಲ್ಲಿ ಎಂದು ನಿಮಗನಿಸಬಹುದು. ಇಬ್ಬರು ಪುರುಷರು ಪ್ರವಾಹದ ಮಧ್ಯೆಯೂ ಮದ್ಯಪಾನ ಮಾಡಿದ್ದಾರೆ. ಅಚ್ಚರಿ ಎಂದರೆ ಮೊಣಕಾಲಿನವರೆಗೆ ನೀರು ಇದ್ದರೂ ಕುರ್ಚಿಯಲ್ಲಿ ಆರಾಮಾಗಿ ಕುಳಿತು ಮದ್ಯಪಾನ ಮಾಡುತ್ತಿರುವ ದೃಶ್ಯದ ವಿಡಿಯೊ ವೈರಲ್ (Viral Video) ಆಗಿದೆ. ವಸತಿ ಕಟ್ಟಡದ ಹೊರಗೆ ಪ್ರವಾಹಕ್ಕೆ ಸಿಲುಕಿದ ರಸ್ತೆಯಲ್ಲಿ ಇಬ್ಬರು ಪುರುಷರು ಟೇಬಲ್, ಕುರ್ಚಿಗಳು ಮತ್ತು ಗ್ಲಾಸ್‌ಗಳೊಂದಿಗೆ ಮದ್ಯದ ಬಾಟಲಿಗಳನ್ನು ಜೋಡಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇಂಗ್ಲೆಂಡ್‍ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇದನ್ನು ರೀಶೇರ್ ಮಾಡಿ, ಲೆಜೆಂಡ್ಸ್ ಎಂದು ನಗುವ ಎಮೋಜಿಗಳೊಂದಿಗೆ ಹಂಚಿಕೊಂಡಿದ್ದಾರೆ. ನೆಟ್ಟಿಗರು ಕೂಡ ಈ ವಿಡಿಯೊಗೆ ಪ್ರತಿಕ್ರಿಯೆಗಳ ಪ್ರವಾಹವನ್ನೇ ಹರಿಸಿದ್ದಾರೆ. ಪುರುಷರು ಯಾವತ್ತಿಗೂ ಪುರುಷರೇ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಮಸ್ಯೆ ಬಗ್ಗೆ ಏನೂ ತಲೆಕೆಡಿಸಿಕೊಳ್ಳದೆ ಆನಂದಿಸುವುದರಿಂದ ಆ ಸಮಸ್ಯೆಯೇ ನಾಚಿಕೆಪಡಬೇಕು ಎಂದು ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ ಪ್ರತಿಕ್ರಿಯಿಯಿದ್ದಾರೆ.
