ಉದಯವಾಹಿನಿ, ಡೆಹ್ರಾಡೂನ್: ಶನಿವಾರ ಮುಂಜಾನೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ಅನೇಕ ಮನೆಗಳು ಸರ್ವನಾಶವಾಗಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.ಶನಿವಾರ ಮುಂಜಾನೆ 1 ಗಂಟೆಯ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಅವಶೇಷಗಳಡಿ ಹುಡುಗಿಯೊಬ್ಬಳು ಸಿಲುಕಿಕೊಂಡಿದ್ದು, ಪೊಲೀಸ್ ಹಾಗೂ ಎಸ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೇಘಸ್ಫೋಟದಿಂದ ಅನೇಕ ವಾಹನಗಳು ಹಾಗೂ ಅಂಗಡಿಗಳು ಸಹ ಜಲಸಮಾಧಿಯಾಗಿದೆ.
ಡೆಹ್ರಾಡೂನ್, ತೆಹ್ರಿ, ಪೌರಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್ ಮತ್ತು ಅಲ್ಮೋರಾ ಸೇರಿದಂತೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಕ್ಷಣಾ ತಂಡಗಳೊಂದಿಗೆ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಥರಾಲಿ ಬಜಾರ್, ರಾಡಿಬಾಗ್ ಮತ್ತು ಚೆಪ್ಡೊ ಗ್ರಾಮಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ವರದಿಗಳು ತಿಳಿಸಿವೆ. ಮೇಘಸ್ಫೋಟದ ಪರಿಣಾಮ ಅವಶೇಷಗಳು ರಸ್ತೆಯಲ್ಲಿ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪಿಥೋರಗಢದಲ್ಲಿ, ಭೂಕುಸಿತದಿಂದಾಗಿ ಥಾಲ್-ಮುನ್ಸಾರಿ ಮತ್ತು ಮುನ್ಸಾರಿ-ಮಿಲಮ್ ರಸ್ತೆಗಳು ಮುಚ್ಚಲ್ಪಟ್ಟಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮಳೆ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ನಿವಾಸಿಗಳು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅನೇಕ ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!