ಉದಯವಾಹಿನಿ, ಅಲಸ್ಕಾ ಶೃಂಗಸಭೆಯಿಂದ ಸಕಾರಾತ್ಮಕ ಫಲಿತಾಂಶ ದೊರೆಯುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ. ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ಅವರು ಭಾರತದ ರಫ್ತುಗಳ ಮೇಲೆ ಹೆಚ್ಚುವರಿ 25% ಸುಂಕವನ್ನು ವಿಧಿಸುವುದನ್ನು ತಪ್ಪಿಸಲು ಅಸಮರ್ಥರಾಗಿರುವುದು ನಿರಾಶೆಯನ್ನುಂಟು ಮಾಡಿದೆ. ಅಲಸ್ಕಾದಲ್ಲಿ ಅಮೆರಿಕ-ರಷ್ಯಾ ಮಾತುಕತೆಗಳು ಅಪೂರ್ಣಗೊಂಡಿವೆ. ಇದರಿಂದ ಭಾರತದ ವ್ಯಾಪಾರ ಮಾತುಕತೆಗಳ ಬಗ್ಗೆ ಅನಿಶ್ಚಿತತೆಯ ಮೋಡ ಆವರಿಸಿದೆ. ಇದುವರೆಗೂ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಭಾರತದ ಮುಂದಿನ ನಡೆಯೂ ಕುತೂಹಲ ಮೂಡಿಸಿದೆ.
ರಷ್ಯಾದಿಂದ ತೈಲ ಆಮದಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಭಾರತವೇ ಪಡೆಯುತ್ತಿದೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕಗೆ ಅಸಮಾಧಾನ ಇದೆ. ಹೀಗಾಗಿ, ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ಅಮೆರಿಕ ಎಚ್ಚರಿಸುತ್ತಲೇ ಬಂದಿದೆ. ಆದರೆ, ಭಾರತ ಅದಕ್ಕೆ ಕ್ಯಾರೆ ಎಂದಿಲ್ಲ. ಇದರಿಂದ ಕೆರಳಿರುವ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ. ಅಮೆರಿಕದ ಸಂಭಾವ್ಯ ದಂಡಗಳಿಂದಾಗಿ ರಷ್ಯಾದ ಆಮದುಗಳನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಬಂದರೆ ಭಾರತದ ಮುಂದಿನ ಕಥೆ ಏನು ಎಂಬ ಪ್ರಶ್ನೆ ಮೂಡಿದೆ. ಸುಂಕಕ್ಕೆ ಬಗ್ಗದೇ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಾ..? ಯುಎಸ್‌ನ ಸುಂಕದಿಂದ ಪಾರಾಗಲು ನಿರ್ಧಾರ ಕೈಗೊಳ್ಳುತ್ತಾ? ಒಂದು ವೇಳೆ ರಷ್ಯಾದ ತೈಲ ಖರೀದಿಯನ್ನು ಕೈಬಿಟ್ಟರೆ ಭಾರತಕ್ಕೆ ಇರುವ ಆಯ್ಕೆಗಳೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಭಾರತ, ರಷ್ಯಾದ ತೈಲವನ್ನೇ ಆಮದು ಮಾಡಿಕೊಳ್ಳೋದ್ಯಾಕೆ?
2022 ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿ ತನ್ನ ಪೂರೈಕೆಯನ್ನು ನಿಲ್ಲಿಸಿದವು. ನಂತರ ಭಾರತವು ರಿಯಾಯಿತಿ ದರದಲ್ಲಿ ಮಾರಾಟವಾಗುವ ರಷ್ಯಾದ ತೈಲವನ್ನು ಖರೀದಿಸಲು ಮುಂದಾಯಿತು. ಉಕ್ರೇನ್ ಯುದ್ಧದ ಮೊದಲು ರಷ್ಯಾ 2% ಕ್ಕಿಂತ ಕಡಿಮೆಯಿದ್ದದ್ದು, ಭಾರತದ ಒಟ್ಟಾರೆ ಪೂರೈಕೆಯಲ್ಲಿ ಸುಮಾರು 35% ರಷ್ಟನ್ನು ಹೊಂದಿದೆ. ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ನಂತರ ಪೂರೈಕೆ ಕೊರತೆಯ ಭೀತಿಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 11,963 ರೂ.ಗೆ ಏರಿತು. ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವು ಭಾರತೀಯ ಸಂಸ್ಕರಣಾಗಾರಗಳ ವೆಚ್ಚವನ್ನು ಕಡಿಮೆ ಮಾಡಿದೆ. ಭಾರತವು ತನ್ನ ತೈಲ ಅಗತ್ಯಗಳಲ್ಲಿ 85% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.
