ಉದಯವಾಹಿನಿ, ಟೆಲ್ ಅವೀವ್: ಗಾಜಾ ನಗರದ ವಿನಾಶದ ಬಗ್ಗೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಹಮಾಸ್ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ ವೈಮಾನಿಕ ದಾಳಿಗಳು ತೀವ್ರಗೊಳ್ಳುತ್ತವೆ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಗಾಜಾದಲ್ಲಿ ಹಮಾಸ್‌ನ ಕೊಲೆಗಾರರು ಮತ್ತು ಅತ್ಯಾಚಾರಿಗಳಿಗೆ ನರಕದ ದ್ವಾರಗಳು ಶೀಘ್ರದಲ್ಲೇ ತೆರೆಯಲಿದೆ. ಅವರು ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್‌ನ ಷರತ್ತುಗಳಿಗೆ ಒಪ್ಪುವವರೆಗೆ ದಾಳಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮಾಡಬೇಕು. ಹಮಾಸ್ ಸಂಪೂರ್ಣ ನಿಶ್ಯಸ್ತ್ರೀಕರಣವಾಗಬೇಕು ಎಂದು ಇಸ್ರೇಲ್ ಹೇಳಿದೆ. ಇದಕ್ಕೆ ಪ್ರತಿಯಾಗಿ ನಿಶ್ಯಸ್ತ್ರೀಕರಣದ ಪ್ರಸ್ತಾಪವನ್ನು ತಿರಸ್ಕರಿಸುತ್ತೇವೆ. ಬಂಧಿತರನ್ನು ಬಿಡುಗಡೆ ಮಾಡುತ್ತೇವೆ. ಯುದ್ಧವನ್ನು ಕೊನೆಗೊಳಿಸುವುದಿಲ್ಲ ಎಂದು ಹಮಾಸ್ ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಸೇನಾ ಕಾರ್ಯಾಚರಣೆಗಾಗಿ ಮಿಲಿಟರಿಗೆ ಅಧಿಕಾರ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಷರತ್ತಿನ ಮೇಲೆ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದರು. ಇದು ಇತ್ತೀಚಿನ ಕದನ ವಿರಾಮ ಪ್ರಸ್ತಾವನೆ ಬಗ್ಗೆ ಇಸ್ರೇಲ್‌ನ ಮೊದಲ ಬಹಿರಂಗ ಪ್ರತಿಕ್ರಿಯೆಯಾಗಿದೆ.
