ಉದಯವಾಹಿನಿ, ಪೆಂಬ್ರೋಕ್: ನಯಾಗರಾ ಜಲಪಾತಕ್ಕೆಂದು ಹೋಗಿದ್ದ ಪ್ರವಾಸಿ ಬಸ್ ಅಪಘಾತಕ್ಕೀಡಾಗಿದೆ. ನಯಾಗರಾ ಜಲಪಾತದಿಂದ ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದ ವೇಳೆ ಪ್ರವಾಸಿ ಬಸ್ ಅಪಘಾತ ಸಂಭವಿಸಿದೆ. ಭಾರತೀಯರು, ಚೈನೀಸ್, ಮತ್ತು ಫಿಲಿಪಿನೋ ಮೂಲದ 54 ಪ್ರಯಾಣಿಕರೊಂದಿಗೆ ಚಲಿಸುತ್ತಿದ್ದ ಬಸ್ ಇಂಟರ್‌ಸ್ಟೇಟ್ 90 ಹೆದ್ದಾರಿಯ ಪೆಂಬ್ರೋಕ್ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, ಡಜನ್‌ಗಟ್ಟಲೆ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು, ಕೊನೆಗೆ ಬಲಭಾಗದ ಕಂದಕಕ್ಕೆ ಉರುಳಿದೆ, ಇದರಿಂದ ಕಿಟಕಿಗಳು ಒಡೆದು ಹಲವರು ಹೊರಗೆ ಬಿದ್ದಿದ್ದಾರೆ. ಈ ಘಟನೆಯು ನ್ಯೂಯಾರ್ಕ್ ರಾಜ್ಯದ ಪೆಂಬ್ರೋಕ್‌ನಲ್ಲಿ, ಬಫಲೋದಿಂದ ಸುಮಾರು 40 ಕಿಲೋಮೀಟರ್ ಪೂರ್ವಕ್ಕೆ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ..!: ಎಂ & ವೈ ಟೂರ್ ಇಂಕ್.ಗೆ ಸೇರಿದ ಈ ಬಸ್, ಇಂಟರ್‌ಸ್ಟೇಟ್ 90ರ ಎಕ್ಸಿಟ್ 48Aಕ್ಕೆ ಸ್ವಲ್ಪ ಮೊದಲು ಸಾಗುತ್ತಿತ್ತು. ನ್ಯೂಯಾರ್ಕ್ ರಾಜ್ಯ ಪೊಲೀಸರ ವಕ್ತಾರ ಟ್ರೂಪರ್ ಜೇಮ್ಸ್ ಒ’ಕಾಲಗನ್ ಅವರ ಪ್ರಕಾರ, “ಚಾಲಕನಿಂದ ಬಸ್ ನಿಯಂತ್ರಣ ಕಳೆದುಕೊಂಡು ಮಧ್ಯದ ಡಿವೈಡರ್‌ಗೆ ಡಿಕ್ಕಿಯಾಯಿತು, ನಂತರ ಓವರ್-ಕರೆಕ್ಷನ್ ಮಾಡಿದಾಗ ಬಸ್ ರಸ್ತೆಯ ಬಲಭಾಗದ ಕಂದಕಕ್ಕೆ ಉರುಳಿತು.” ಎಂದು ಹೇಳಿದ್ದಾರೆ. ಈ ಅಪಘಾತದಲ್ಲಿ ಬಸ್‌ನ ಕಿಟಕಿಗಳು ಒಡೆದು, ಹೆಚ್ಚಿನ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸಿರದ ಕಾರಣ, ಹಲವರು ಹೊರಗೆ ಬಿದ್ದಿದ್ದಾರೆ. ಬಸ್‌ನಲ್ಲಿ ಮಕ್ಕಳು ಸೇರಿದಂತೆ 54 ಜನರಿದ್ದರು, ಮತ್ತು ಹೆಚ್ಚಿನ ಪ್ರಯಾಣಿಕರು ಭಾರತೀಯ, ಚೈನೀಸ್, ಮತ್ತು ಫಿಲಿಪಿನೋ ಮೂಲದವರಾಗಿದ್ದರು.
