ಉದಯವಾಹಿನಿ, ರಾಯಚೂರು: ವೀರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ. ನ್ಯಾಯಯುತವಾಗಿ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.ರಾಯಚೂರಿನಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಇಡಿ ಬಂಧನ ವಿಚಾರವಾಗಿ ಮಾತನಾಡಿದ ಅವರು, ಗ್ಯಾಂಬ್ಲಿಂಗ್ ಮಾಡ್ತಾರೋ ಅಥವಾ ಮತ್ತೊಂದೋ. ಯಾರೇ ಏನೇ ಮಾಡಿರಲಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಸರ್ಕಾರ ಎಂದೂ ಅವಕಾಶ ಕೊಡುವುದಿಲ್ಲ. ಅವರು ಯಾರೇ ಇರಲಿ ಅವರ ಮೇಲೆ ಕ್ರಮ ತಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನೂ ಧರ್ಮಸ್ಥಳದ ಪ್ರಕರಣವು ಈಗಾಗಲೇ ಒಂದು ಹಂತಕ್ಕೆ ಬಂದಿದೆ. ಎಸ್‌ಐಟಿ ರಚನೆ ಮಾಡಿ ತನಿಖೆ ನಡೆದಿರುವುಕ್ಕೆ ಹೆಗ್ಗಡೆಯವರು ಸ್ವಾಗತ ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿ, ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿದೆ ಅಂತ ಹೆಗ್ಗಡೆಯವರು ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಈಗಾಗಲೇ ಎಫ್‌ಐಆರ್ ಮಾಡಿ, ಬಂಧನವೂ ಆಗಿದೆ. ಯಾವುದೇ ಸರ್ಕಾರ ಇರಲಿ ದೂರು ಬಂದರೆ ತನಿಖೆ ಮಾಡುವ ಜವಾಬ್ದಾರಿ ಇರುತ್ತದೆ. ಹಾಗಾಗಿ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ. ಈಗ ಸತ್ಯ ಹೊರ ಬರುತ್ತಿದೆ ಎಂದು ಹೇಳಿದ್ದಾರೆ.
