ಉದಯವಾಹಿನಿ,ಬೆಂಗಳೂರು: ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ 2 ಬಾರಿ ಟ್ರೋಫಿ ಗೆದ್ದು ಸಂಭ್ರಮಿಸಿರುವ ಟೀಮ್ ಇಂಡಿಯಾ, ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲೂ ಚಾಂಪಿಯನ್ ಪಟ್ಟ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದು, ಅದಕ್ಕಾಗಿ ವೆಸ್ಟ್ ಇಂಡೀಸ್ ಸರಣಿಯಿಂದಲೇ ಭರ್ಜರಿ ಸಮರಾಭ್ಯಾಸ ನಡೆಸಲು ಸಜ್ಜಾಗಿದೆ. 1983ರ ಜೂನ್ 25ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ಸಾರಥ್ಯದ ಟೀಮ್ ಇಂಡಿಯಾ, 2 ಬಾರಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಮಣಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು.
2011ರಲ್ಲಿ ತವರಿನ ಅಂಗಳ ಅತಿಥ್ಯದ ಲಾಭ ಪಡೆದ ಎಂಎಸ್ ಧೋನಿ ಸಾರಥ್ಯದಲ್ಲಿ 2ನೇ ಬಾರಿ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಈಗ ಸಂಪೂರ್ಣ ತವರಿನಂಗಳದಲ್ಲೇ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ಟೂರ್ನಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಗರಡಿಯಲ್ಲಿ ರೋಹಿತ್ ಶರ್ಮಾ ಪಡೆ ಟ್ರೋಫಿ ಗೆಲ್ಲುವ ಭರವಸೆಯಲ್ಲಿದೆ. ಟೀಮ್ ಇಂಡಿಯಾ 2023ರ ಏಕದಿನ ವಿಶ್ವಕಪ್ ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಬೇಕಾದರೆ ಬಲಿಷ್ಠ ತಂಡದೊಂದಿಗೆ ಸಿಬ್ಬಂದಿಗಳ ನಿರ್ವಹಣೆಯೂ ಮುಖ್ಯವಾಗಿರುತ್ತದೆ.
