ಉದಯವಾಹಿನಿ, ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆ ಹೆಸರಿನಲ್ಲಿ ರಾಜ್ಯದಲ್ಲಿ ಭಯ ಹುಟ್ಟಿಸುವ ಕೆಲವು ಕಾಲಂಗಳನ್ನು ತರಲಾಗಿದ್ದು, ಅವುಗಳನ್ನು ಹಿಂಪಡೆದು ಸಂವಿಧಾನದ ಆಶಯದಂತೆ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ಇಲ್ಲಿಯ ನವನಗರದ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿವಿಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಮಾಜದಲ್ಲಿ ಸಾಮರಸ್ಯ ಕದಡಬಾರದು. ಹಾಗಾಗಿ ಕಾನೂನಿನಲ್ಲಿ ಅಗತ್ಯ ಬದಲಾವಣೆ ಹಾಗೂ ಸರಿಪಡಿಸುವ ಕೆಲಸ ಮಾಡುತ್ತೇವೆ.
ಜತೆಗೆ ಸರ್ಕಾರಿ ವ್ಯಾಜ್ಯಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯ ಇದೆ. ಇದಕ್ಕಾಗಿ “ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಕಾನೂನು’ ತರಲು ಹೊರಟಿದ್ದೇವೆ ಎಂದು ಅವರು ಹೇಳಿದರು. ನ್ಯಾಯಾಲಯಗಳಲ್ಲಿ ಬಡವರ ವ್ಯಾಜ್ಯಗಳು ಕೆಲವು ಐದು, ಹತ್ತು ವರ್ಷ ಆದರೂ ವಿಲೇವಾರಿ ಆಗದೇ ಅವರಿಗೆ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ. ನ್ಯಾಯದ ಬಗ್ಗೆ ಅವರಿಗೆ ಭರವಸೆ ಕಡಿಮೆ ಆಗುತ್ತಿದೆ. ಇದಕ್ಕಾಗಿ ಬಡವರ ವ್ಯಾಜ್ಯಗಳನ್ನು ಆದ್ಯತೆ ಮೇಲೆ ಕೋರ್ಟ್ ಗಳು ತೆಗೆದುಕೊಳ್ಳಲು ಕಾನೂನು ತಿದ್ದುಪಡಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಿಪಿಸಿ (ಕೋಡ್ ಆಪ್ ಸಿವಿಲ್ ಪ್ರೊಸಿಜರ್) ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪಾಟೀಲ ಹೇಳಿದರು.
