ಉದಯವಾಹಿನಿ, ಶಿವಮೊಗ್ಗ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗ ಪಕ್ಷದಿಂದ ಧರ್ಮಸ್ಥಳ ಯಾತ್ರೆ ನಡೆಯುತ್ತಿದೆ.ಗಂಗಾ ಜಲ, ತುಂಗಾ ಜಲ ಹಿಡಿದು ಧರ್ಮ ರಕ್ಷಾ ಜಾಥಾ ಘೋಷವಾಕ್ಯದೊಂದಿಗೆ ಧರ್ಮಸ್ಥಳಕ್ಕೆ ಪಕ್ಷದ ನೂರಾರು ಕಾರ್ಯಕರ್ತರ ಜೊತೆ ಈಶ್ವರಪ್ಪ ಹೊರಟಿದ್ದಾರೆ. ಜಾಥಕ್ಕೂ ಮುನ್ನ ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಮಾಸ್ತ್ಯಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ, ಧರ್ಮಸ್ಥಳದ ವಿರುದ್ಧ ಹೆಣೆದಿರುವ ಷಡ್ಯಂತ್ರದ ಕಳಂಕವನ್ನು ಗಂಗಾ, ತುಂಗಾ ಜಲದಿಂದ ತೊಳೆಯುತ್ತೇವೆ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಧರ್ಮ ಜಾಗೃತಿ ಮೂಡಿಸಲು ನೂರಾರು ವಾಹನದಲ್ಲಿ ಧರ್ಮ ರಕ್ಷಾ ಜಾಥಾ ಕೈಗೊಂಡಿದ್ದೇವೆ. ವಿರೇಂದ್ರ ಹೆಗ್ಗಡೆಯವರೊಂದಿಗೆ ನಾವಿದ್ದೇವೆ. ಧರ್ಮಸ್ಥಳ ಪ್ರಕರಣವನ್ನು ಎನ್‍ಐಎಗೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸಹ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಯಾತ್ರೆ ಕೈಗೊಂಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದರು, ಶಾಸಕರ ನಿಯೋಗ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ನೈತಿಕ ಬೆಂಬಲ ಸೂಚಿಸಿದ್ದರು. ಸೆ.1 ರಂದು ನಿಖಿಲ್ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ಸಹ ಧರ್ಮಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ, ಷಡ್ಯಂತ್ರದ ವಿರುದ್ಧ ಗುಡುಗಿದ್ದ ನಿಖಿಲ್, ಮಂಜುನಾಥ ಹಾಗೂ ಅಣ್ಣಪ್ಪಸ್ವಾಮಿಯಿಂದ ದುಷ್ಟರ ನಾಶ ಎಂದಿದ್ದರು.
