ಉದಯವಾಹಿನಿ, ಬೆಂಗಳೂರು: ದೊಡ್ಡಬಳ್ಳಾಪುರದ ತೂಬಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಗಣೇಶನನ್ನು ಆನೆಯ ಮೇಲೆ ಅಂಬಾರಿಯ ಅಲಂಕಾರ ಮಾಡಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಿದ್ದಾರೆ. ನಾಡಹಬ್ಬ ದಸರಾ ಮಾದರಿಯಲ್ಲಿಯೇ ಗಣೇಶನ ಮೆರವಣಿಗೆ ಮಾಡಲಾಗಿದೆ.ಗ್ರಾಮದ ಚಾವಡಿ ಗಣೇಶೋತ್ಸವ ಸಮಿತಿಯವರು ಇದೇ ಮೊದಲ ಬಾರಿಗೆ ಅಂಬಾರಿ ಗಣೇಶನ ಮೆರವಣಿಗೆ ಆಯೋಜನೆ ಮಾಡಿದ್ದು, ಜನರ ಗಮನ ಸೆಳೆಯಿತು. ದಸರಾ ಆನೆಯಂತೆ ಅಲಂಕೃತಗೊಂಡು ಸಿಂಗಾರಗೊಂಡಿದ್ದ ಲಕ್ಷ್ಮೀ ಹೆಸರಿನ ಆನೆಯ ಮೇಲೆ ಅಂಬಾರಿಯಲ್ಲಿ ಗಣೇಶನನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಆನೆಯ ಮೆರವಣಿಗೆಯೊಂದಿಗೆ, ನಾದಸ್ವರದ ಮೇಳ, ಡೊಳ್ಳು-ಕುಣಿತ, ಜಾನಪದ ತಂಡಗಳ ಸೊಗಸು ಎಲ್ಲವೂ ಸೇರಿ ದಸರಾ ವೈಭವವದ ಕಳೆಯನ್ನು ತಂದಿತ್ತು. ಈ ಅಂಬಾರಿ ಗಣೇಶನ ಮೆರವಣಿಗೆಗೆ ಸಚಿವ ಕೆ.ಎಚ್ ಮುನಿಯಪ್ಪ ಪುಷ್ಪನಮನದ ಮೂಲಕ ಚಾಲನೆ ನೀಡಿದ್ದರು.
