ಉದಯವಾಹಿನಿ, ಮುಂಬೈ: ವಾಣಿಜ್ಯ ನಗರಿ ಮುಂಬೈನ ನಾನಾವತಿ ಆಸ್ಪತ್ರೆ ಸಮೀಪದ ಸೇಂಟ್ ಬ್ರಾಜ್ ರಸ್ತೆಯಲ್ಲಿರುವ ಕಟ್ಟಡದ ಬಾಲ್ಕನಿ ಭಾಗ ಕುಸಿದು ಐವರು ಗಾಯಗೊಂಡಿರುವ ಭಾನುವಾರ ಮಧ್ಯಾಹ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರೊಂದಿಗೆ ಎರಡು ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿವೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಮತ್ತೊಂದು ಘಟನೆಯಲ್ಲಿ, ಮುಂಬೈನ ಘಾಟ್‌ಕೋಪರ್ ನ ರಾಜವಾಡಿ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದಿದ್ದು, ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನಿಬ್ಬರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ,” ಬೃಹನ್ ಮುಂಬೈ ನಗರಸಭೆಯ ವಿಪತ್ತು ನಿರ್ವಹಣಾ ವಿಭಾಗದ ಮುಖ್ಯ ಅಧಿಕಾರಿ ರಶ್ಮಿ ಲೋಖಂಡೆ ತಿಳಿಸಿದ್ದಾರೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡವಿದ್ದು, ಕಟ್ಟಡದೊಳಗೆ ಸಿಲುಕಿರುವ ಇತರ ಜನರನ್ನು ಪತ್ತೆಹಚ್ಚಲು ಮತ್ತು ಹೊರತೆಗೆಯಲು ಪ್ರಯತ್ನಿಸುತ್ತಿದೆ. ನಮ್ಮ ಮೂರು ತಂಡಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ನೆಲಮಹಡಿ ಸಂಪೂರ್ಣವಾಗಿ ಕುಸಿದಿದೆ ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಎನ್ ಡಿಆರ್ ಎಫ್ ನ ಸಹಾಯಕ ಕಮಾಂಡೆಂಟ್ ಸಾರಂಗ್ ಕುರ್ವೆ ಹೇಳಿದ್ದಾರೆ.
