ಉದಯವಾಹಿನಿ, ಸೆಹೋರ್, ಮಧ್ಯಪ್ರದೇಶ: ಸಿದ್ದಿಕ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಟಿಬುಪುರ ಗ್ರಾಮದಲ್ಲಿ ದಂಪತಿ ಅಪಹರಣ, ದೈಹಿಕ ಹಲ್ಲೆ ಮತ್ತು ಅಮಾನವೀಯ ವರ್ತನೆ ಒಳಗೊಂಡ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಈ ಪ್ರದೇಶದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಉಜ್ಜಯಿನಿ ಜಿಲ್ಲೆಯ ಶಂಕರ್‌ಪುರ ಗ್ರಾಮದ ನಿವಾಸಿಯೊಬ್ಬರು ಗುರುವಾರ ತನ್ನ ಪತ್ನಿಯೊಂದಿಗೆ ದೇವಾಸ್ ಜಿಲ್ಲೆಯ ಸೋಂಕಾಚ್ ತಹಸಿಲ್‌ನ ಭಟ್ಕುಂಡ್ ಗ್ರಾಮದಲ್ಲಿ ಪರಿಚಯಸ್ಥರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಯಾಣಿಸಿದ್ದರು. ದಂಪತಿಗಳು ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಮಾನವೀಯ ಘಟನೆ ನಡೆದಿದೆ.
ದಂಪತಿ ಅಪಹರಿಸಿದ ಗ್ರಾಮಸ್ಥರು: ದಂಪತಿಗಳ ಆಗಮನದ ಬಗ್ಗೆ ತಿಬುಪುರ ಗ್ರಾಮದ ನಿವಾಸಿಯೊಬ್ಬರಿಗೆ ಮೊದಲೇ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಅವರು ಹಲವಾರು ಸಹಚರರೊಂದಿಗೆ ಚೌಬಾರಾ ಜಾಗೀರ್ ರಸ್ತೆಯಲ್ಲಿ ದಂಪತಿ ಮೇಲೆ ದಾಳಿ ನಡೆಸಿದ್ದಾರೆ. ಥಳಿತಕ್ಕೆ ಒಳಗಾದ ದಂಪತಿ ತಮ್ಮ ಮೋಟಾರ್ ಸೈಕಲ್‌ನಲ್ಲಿ ಆ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ, ಆರೋಪಿಗಳು ಅವರನ್ನು ತಡೆದಿದ್ದಾರೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ, ಆರೋಪಿಗಳು ಯಾವುದೇ ಪ್ರಚೋದನೆ ಅಥವಾ ಸಂಭಾಷಣೆ ಇಲ್ಲದೇ ದಂಪತಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ. ಹಾಡಹಗಲೇ ಇಬ್ಬರನ್ನೂ ಅಮಾನುಷವಾಗಿ ಥಳಿಸಲಾಗಿದೆ. ಈ ವೇಳೆ, ದಂಪತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಷ್ಟಾದರೂ ದಾಳಿಕೋರರ ಕೋಪ ಕಡಿಮೆಯಾಗಿಲ್ಲ. ಆರೋಪಿಗಳು ಸಂತ್ರಸ್ತರನ್ನು ಬಲವಂತವಾಗಿ ವಾಹನವೊಂದಕ್ಕೆ ಹತ್ತಿಸಿಕೊಂಡು ಅಲ್ಲೂ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.

ಚಪ್ಪಲಿ ಹಾರವನ್ನು ಧರಿಸುವಂತೆ ಒತ್ತಾಯಿಸಿ ಅವಮಾನ ಆರೋಪ: ದಂಪತಿಗಳನ್ನು ವಾಹನದಲ್ಲಿ ಕೂಡಿಸಿಕೊಂಡು ತಿಬುಪುರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರ ಮೇಲೆ ಮತ್ತೊಂದು ಸುತ್ತಿನ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಅಷ್ಟೇ ಅಲ್ಲ ಆರೋಪಿಗಳು ಸಂತ್ರಸ್ತ ದಂಪತಿಗಳಿಗೆ ಚಪ್ಪಲಿ ಹಾರಗಳನ್ನು ಧರಿಸುವಂತೆ ಒತ್ತಾಯಿಸುವ ಮೂಲಕ ಅವಮಾನಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯಗಳನ್ನು ಅಲ್ಲೇ ಇದ್ದವರೊಬ್ಬರು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಘಟನೆ ಈಗ ಭಾರಿ ಸದ್ದು ಮಾಡುತ್ತಿದೆ.

ಮುರಿದ ನಿಶ್ಚಿತಾರ್ಥದ ಬಳಿಕ ಹಲ್ಲೆ: ಸೋಷಿಯಲ್​ ಮೀಡಿಯಾದಲ್ಲಿ ಈ ಘಟನೆ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸಿದ್ದಿಕ್‌ಗಂಜ್ ಪೊಲೀಸರು, ಈ ಘಟನೆ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು, ಆರೋಪಿಗಳಿಂದ ದಂಪತಿಯನ್ನು ಕಾಪಾಡಿ, ವೈದ್ಯಕೀಯ ಚಿಕಿತ್ಸೆಗೆ ರವಾನಿಸಿದ್ದಾರೆ.

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಬಾಲಕಿಯ ನಿಶ್ಚಿತಾರ್ಥವನ್ನು ಮುರಿದುಹಾಕುವುದಕ್ಕೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸೋಂಕಾಚ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ನಾವು ಇಬ್ಬರು ಆರೋಪಿಗಳನ್ನು ಬಂಧಿಸಿ ಸೋಂಕಾಚ್ ಪೊಲೀಸರಿಗೆ ಹಸ್ತಾಂತರಿಸಿದ್ದೇವೆ. ಉಳಿದ ಆರೋಪಿಗಳನ್ನು ಬಂಧಿಸಲು ನಿರಂತರ ದಾಳಿ ನಡೆಸಲಾಗುತ್ತಿದೆ. ಅವರೆಲ್ಲರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಡಿಒಪಿ ದಾಮೋದರ್ ಗುಪ್ತಾ ದೂರವಾಣಿ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!