ಉದಯವಾಹಿನಿ, ಎಳನೀರು ಆರೋಗ್ಯಕ್ಕೆ ಅಮೃತವಿದ್ದಂತೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ. ಅದರಲ್ಲಿಯೂ ಬೇಸಿಗೆಯಲ್ಲಿ ಇದಕ್ಕಿರುವ ಬೇಡಿಕೆ ಬೇರೆಯಾವುದಕ್ಕೂ ಇರುವುದಿಲ್ಲ. ಇದು ದೇಹದ ನೀರಿನ ಕೊರತೆಯನ್ನು ನೀಗಿಸುವುದಲ್ಲದೆ, ಸೋಡಿಯಂ ಮತ್ತು ಪೊಟ್ಯಾಸಿಯಂ ಸೇರಿದಂತೆ ಪ್ರಮುಖ ಖನಿಜಗಳನ್ನು ಒದಗಿಸುತ್ತದೆ. ಆದರೆ ಕೆಲವರಿಗೆ ಕಿಡ್ನಿಗೆ ಸಂಬಂಧ ಪಟ್ಟ ಸಮಸ್ಯೆ ಇರುವವರು ಸೇವನೆ ಮಾಡುವುದು ಸುರಕ್ಷಿತವೇ ಅಥವಾ ಅಲ್ಲವೇ ಎಂಬ ಅನುಮಾನವಿರುತ್ತದೆ. ಅಂತಹ ಗೊಂದಲಗಳಿಗೆ ಆರೋಗ್ಯ ತಜ್ಞರು ನೀಡಿರುವ ಸ್ಪಷ್ಟನೆ ಇಲ್ಲಿದೆ.
ತಜ್ಞರ ಪ್ರಕಾರ, ಎಳನೀರು ಸಾಮಾನ್ಯವಾಗಿ ಆರೋಗ್ಯಕರವಾಗಿದ್ದರೂ, ಕಿಡ್ನಿಗೆ ಸಂಬಂಧ ಪಟ್ಟ ಸಮಸ್ಯೆ ಇರುವ ಎಲ್ಲರಿಗೂ ಇದು ಸೂಕ್ತವಲ್ಲ. ರೋಗಿಯ ಕಿಡ್ನಿ ಸಮಸ್ಯೆಯ ಹಂತ, ಕ್ರಿಯಾಟಿನಿನ್ ಮತ್ತು ಪೊಟ್ಯಾಸಿಯಂ ಮಟ್ಟದ ಮೇಲೆ ಇದರ ಬಳಕೆ ನಿರ್ಧರಿಸಬೇಕು. ರಕ್ತದಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವ ಕಿಡ್ನಿ ರೋಗಿಗಳು ಎಳನೀರು ಕುಡಿಯುವುದನ್ನು ತಪ್ಪಿಸಬೇಕು. ಇದರಿಂದ ಪೊಟ್ಯಾಸಿಯಂ ಇನ್ನಷ್ಟು ಹೆಚ್ಚಾಗಿ, ದೇಹದಲ್ಲಿ ಅಪಾಯಕಾರಿ ಸ್ಥಿತಿ ಉಂಟಾಗಬಹುದು. ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವವರು ಕೂಡ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.ಕಿಡ್ನಿ ಸಮಸ್ಯೆ ಗಂಭೀರವಾಗಿರದವರು ಮತ್ತು ಅವರ ಪೊಟ್ಯಾಸಿಯಂ ಹಾಗೂ ಕ್ರಿಯಾಟಿನಿನ್ ಮಟ್ಟಗಳು ಸಾಮಾನ್ಯವಾಗಿದ್ದರೆ, ಎಳನೀರು ಕುಡಿಯುವುದು ಪ್ರಯೋಜನಕಾರಿ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅಗತ್ಯ ಖನಿಜಗಳನ್ನು ಪೂರೈಸುತ್ತದೆ.

Leave a Reply

Your email address will not be published. Required fields are marked *

error: Content is protected !!