ಉದಯವಾಹಿನಿ, ಸಾಮಾನ್ಯವಾಗಿ ಆರೋಗ್ಯಕ್ಕೆ ಲಾಭಕರ ಎಂದು ಪರಿಗಣಿಸಲ್ಪಡುವ ನೇರಳೆ ಹಣ್ಣು(ಜಾಮೂನು) ಎಲ್ಲರಿಗೂ ಸೂಕ್ತವಲ್ಲವೆಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಈ ಹಣ್ಣು ಮಧುಮೇಹ ನಿಯಂತ್ರಣ ಸೇರಿದಂತೆ ಹಲವಾರು ಆರೋಗ್ಯ ಲಾಭಗಳನ್ನ ನೀಡುತ್ತದೆ. ಆದರೆ ಕೆಲವು ವ್ಯಕ್ತಿಗಳು ಇದನ್ನ ಸೇವಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ತಜ್ಞರ ಪ್ರಕಾರ, ಕಡಿಮೆ ರಕ್ತದೊತ್ತಡ ಇರುವವರು ನೇರಳೆ ಹಣ್ಣು ಸೇವಿಸುವುದರಿಂದ ಇನ್ನಷ್ಟು ಸಮಸ್ಯೆ ಎದುರಿಸಬಹುದು. ಇದು ರಕ್ತದೊತ್ತಡವನ್ನ ಇನ್ನಷ್ಟು ಕಡಿಮೆ ಮಾಡಬಹುದಾದ ಕಾರಣ, ಇಂತಹವರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸುವುದು ಉತ್ತಮ. ಇದೇ ರೀತಿ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಇರುವವರು ಕೂಡ ಜಾಮೂನು ತಿನ್ನುವಾಗ ಜಾಗ್ರತೆ ವಹಿಸಬೇಕು, ಏಕೆಂದರೆ ಇದು ಸಕ್ಕರೆ ಮಟ್ಟವನ್ನ ಮತ್ತಷ್ಟು ಇಳಿಸಬಹುದು.

ಜೀರ್ಣಾಂಗ ಸಮಸ್ಯೆಗಳಿರುವವರಿಗೆ ನೇರಳೆ ಹಣ್ಣು ಕೆಲವೊಮ್ಮೆ ಅಸಹನೀಯವಾಗಬಹುದು. ವಿಶೇಷವಾಗಿ ಗ್ಯಾಸ್ಟ್ರಿಕ್ ಅಥವಾ ಅಜೀರ್ಣ ಸಮಸ್ಯೆ ಇರುವವರು ಹೆಚ್ಚು ಪ್ರಮಾಣದಲ್ಲಿ ತಿಂದರೆ ಹೊಟ್ಟೆ ನೋವು, ಉಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು ಅಥವಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಿದ್ಧರಾಗಿರುವವರು ಕೂಡ ಜಾಮೂನು ಸೇವನೆ ತಪ್ಪಿಸುವುದು ಒಳಿತು, ಏಕೆಂದರೆ ಇದು ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಅಲರ್ಜಿಯ ಸಮಸ್ಯೆ ಇರುವ ಕೆಲವರಿಗೆ ನೇರಳೆ ಹಣ್ಣು ತಿಂದ ನಂತರ ಚರ್ಮದ ಕೆರೆತ, ಉರಿ ಅಥವಾ ಇತರ ಪ್ರತಿಕ್ರಿಯೆಗಳು ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸುವುದು ಅಗತ್ಯ. ಜೊತೆಗೆ ಗರ್ಭಿಣಿಯರು ಮತ್ತು ಸ್ತನ್ಯಪಾನ ಮಾಡುವ ತಾಯಂದಿರು ಈ ಹಣ್ಣು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತವೆಂದು ತಜ್ಞರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!