ಉದಯವಾಹಿನಿ, ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ ರಿಯಲ್ ಲೈಫ್‌ನಲ್ಲಿ ಕೆಂಡಾಮಂಡಲವಾಗಿದ್ದಾರೆ. ತಮ್ಮ ಪತ್ನಿ ಮತ್ತು ಮಗುವಿನ ಖಾಸಗಿತನಕ್ಕೆ ಧಕ್ಕೆ ತಂದ ಅಭಿಮಾನಿಯೊಬ್ಬನಿಗೆ, “ಕುಟುಂಬದ ತಂಟೆಗೆ ಬಂದರೆ, ಹೊಡೆದುರುಳಿಸ್ತೀನಿ” ಎಂದು ನೇರವಾಗಿಯೇ ಧಮ್ಕಿ ಹಾಕಿದ್ದಾರೆ!
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿಸಿ ಸನ್ರೈಸರ್ಸ್ ಹೈದರಾಬಾದ್ ತಂಡ ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕ್ಲಾಸೆನ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ನಡೆದು ಬರುತ್ತಿದ್ದಾಗ, ಅಭಿಮಾನಿಯೊಬ್ಬರು ಅತೀ ಸಮೀಪಕ್ಕೆ ಬಂದು ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾರೆ.
ಆರಂಭದಲ್ಲಿ ಸಂಯಮದಿಂದಲೇ ವರ್ತಿಸಿದ ಹೆನ್ರಿಕ್ ಕ್ಲಾಸೆನ್, “ದಯವಿಟ್ಟು ವಿಡಿಯೋ ಮಾಡಬೇಡಿ, ನಮಗೆ ಸ್ವಲ್ಪ ಏಕಾಂತ ಬೇಕು” ಎಂದು ಮನವಿ ಮಾಡಿದ್ದರು. ಆದರೆ ಆ ಅಭಿಮಾನಿ ‘ನಾನು ನಿಮ್ಮ ದೊಡ್ಡ ಫ್ಯಾನ್’ ಎನ್ನುತ್ತಲೇ ಕ್ಯಾಮೆರಾವನ್ನು ಕ್ಲಾಸೆನ್ ಕುಟುಂಬದತ್ತ ತಿರುಗಿಸಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಕ್ಲಾಸೆನ್, ಕುಟುಂಬದ ವಿಡಿಯೋ ಮಾಡದಂತೆ ಸೂಚಿಸಿದ್ದಾರೆ.
ಕುಟುಂಬದ ವಿಡಿಯೋ ಮಾಡಬೇಡಿ ಎಂದು ಸೂಚಿಸಿದರೂ ಅಭಿಮಾನಿ ಮಾತ್ರ ಕ್ಯಾಮೆರಾವನ್ನು ಕ್ಲಾಸೆನ್ ಅವರ ಪತ್ನಿ ಹಾಗೂ ಮಗುವಿನತ್ತ ಹಿಡಿದಿದ್ದ. ಇದರಿಂದ ಕೋಪಗೊಂಡ ಕ್ಲಾಸೆನ್ “ನಾನು ನಿನಗೆ ಮೊದಲೇ ಬೇಡ ಎಂದು ಹೇಳಿದ್ದೇನೆ. ಈಗ ನಾನು ಅಲ್ಲಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ನೀನೇನಾದರೂ ಫೋಟೋ ಅಥವಾ ವಿಡಿಯೋ ತೆಗೆದರೆ, ನಿಜವಾಗಲೂ ಹೊಡೆದುರುಳಿಸುತ್ತೀನಿ” ಎಂದು ಧಮ್ಕಿ ಹಾಕಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ದೂರ ಕಳುಹಿಸಿದ್ದಾರೆ.
