ಉದಯವಾಹಿನಿ, ನವದೆಹಲಿ: ಇದೇ ವರ್ಷದ ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ಭಾರತದ ಚೆನ್ನೈ ಮತ್ತು ಮಧುರೈನಲ್ಲಿ ನಡೆಯಲಿರುವ 2025 ರ ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ನಿಂದ (Junior Hockey World) ಪಾಕಿಸ್ತಾನ(Pakistan) ಹಿಂದೆ ಸರಿಯುವ ಸಾಧ್ಯತೆಯಿದೆ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಪಾಕಿಸ್ತಾನ ಬಿಹಾರದಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನಿಂದ ಹಿಂದೆ ಸರಿದಿತ್ತು. ಇದೀಗ ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ಗೂ ಇದೇ ಕಾರಣ ನೀಡಿ ಬಹಿಷ್ಕರಿಸಲು ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ನಿರ್ಧರಿಸಿದೆ ಎನ್ನಲಾಗಿದೆ.
“ಪಾಕಿಸ್ತಾನ ಜೂನಿಯರ್ ಹಾಕಿ ತಂಡವು ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ, ನಾವು ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ” ಎಂದು ಪಿಎಚ್‌ಎಫ್ ಅಧ್ಯಕ್ಷ ತಾರಿಕ್ ಬುಗ್ತಿ ಲಾಹೋರ್‌ನಲ್ಲಿರುವ ಪಿಎಚ್‌ಎಫ್ ಪ್ರಧಾನ ಕಚೇರಿಯಲ್ಲಿ ಪಾಕಿಸ್ತಾನಿ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

“ಭಾರತದೊಂದಿಗೆ ನಾವು ಹೊಂದಿದ್ದ ಉದ್ವಿಗ್ನತೆಯನ್ನು ಪರಿಗಣಿಸಿ, ನಾವು (ಏಷ್ಯಾ ಕಪ್‌ಗಾಗಿ) ಭಾರತಕ್ಕೆ ಹೋಗುವುದು ಸಂಪೂರ್ಣವಾಗಿ ಅಸಾಧ್ಯವಾಗಿತ್ತು. ಎರಡೂ ಕಡೆಗಳಲ್ಲಿ ಯುದ್ಧದಂತಹ ಪರಿಸ್ಥಿತಿ ಇತ್ತು. ಆದ್ದರಿಂದ, ಪ್ರಸ್ತುತ ಸನ್ನಿವೇಶದಲ್ಲಿ, ನಾವು ಈಗ ಅಥವಾ ಭವಿಷ್ಯದಲ್ಲಿ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ಪರಿಸ್ಥಿತಿ (ಪ್ರಸ್ತುತ) ಒಂದೇ ಆಗಿರುತ್ತದೆ. ಮತ್ತು, ಭಾರತೀಯ ಕ್ರಿಕೆಟ್ ತಂಡ ಇಲ್ಲಿಗೆ ಬರಲು ಸಾಧ್ಯವಾಗದಿದ್ದರೆ, ಪಾಕಿಸ್ತಾನ ಹಾಕಿ ತಂಡ ಕೂಡ ಭಾರತಕ್ಕೆ ಹೋಗುವುದಿಲ್ಲ” ಎಂದಿದ್ದಾರೆ. ಈ ವರ್ಷದ ಆರಂಭದಲ್ಲಿ, ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, ಪಾಕಿಸ್ತಾನವು ವರ್ಷದ ಕೊನೆಯಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಸ್ವಾಗತಾರ್ಹ ಎಂದು ಹೇಳಿದ್ದರು. ಆದರೆ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್‌ನ ಪರಿಣಾಮಗಳ ನಂತರ, ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ಉಂಟಾಗಿದೆ. ಹೀಗಾಗಿ ಪಾಕ್‌ ಈ ಟೂರ್ನಿಯಿಂದ ಹಿಂದೆ ಸರಿಯುವುದು ಖಚಿತ.

Leave a Reply

Your email address will not be published. Required fields are marked *

error: Content is protected !!