ಉದಯವಾಹಿನಿ, ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್ (Asia Cup 2025) ಕ್ರಿಕೆಟ್ ಟೂರ್ನಿಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಹಾಗಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದ ಭಾರತ ತಂಡ 20 ಓವರ್‌ಗಳ ಈ ಮಹತ್ವದ ಟೂರ್ನಿಗೆ ಸಜ್ಜಾಗುತ್ತಿದೆ. ಟೀಮ್ ಇಂಡಿಯಾ ಸೆಪ್ಟಂಬರ್ 10 ರಂದು ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆತಿಥೇಯ ಯುಎಇ ವಿರುದ್ಧ (IND vs UAE) ಆಡುವ ಮೂಲಕ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಂದ ಹಾಗೆ ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಗೆ ಆಗಮಿಸಲಿದೆ. ಯುಎಇ ತಂಡಕ್ಕೆ ದುಬೈನ ತವರು ಮೈದಾನವಾಗಿದ್ದು, ಭಾರತಕ್ಕೆ ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಬಹುದು.
ಯುಎಇ ತಂಡ ತನ್ನ ತವರು ಅಂಗಣದಲ್ಲಿ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ಥಾನ ಸೇರಿದಂತೆ ಬಲಿಷ್ಠ ತಂಡಗಳನ್ನು ಸೋಲಿಸಿದೆ. ಹಾಗಾಗಿ ಭಾರತ ತಂಡ, ಯುಎಇ ತಂಡವನ್ನು ಹಗುರವಾಗಿ ಪರಿಗಣಿಸಬಾರದು. ಗುಂಪು ಹಂತದಲ್ಲಿನ ಎಲ್ಲಾ ಪಂದ್ಯಗಳು ಮುಖ್ಯವಾಗಿರುವ ಕಾರಣ ಭಾರತ ತಂಡ ತನ್ನ ಕಡೆಯಿಂದ ಶೇ 100 ರಷ್ಟು ಪ್ರಯತ್ನವನ್ನು ಹಾಕಬೇಕಾಗುತ್ತದೆ. ಒಂದು ವೇಳೆ ಯುಎಇ ವಿರುದ್ಧ ಸೋತರೆ ಭಾರತ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಠಿಣ ಸವಾಲು ಎದುರಾಗಲಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ತನ್ನ ಪ್ಲೇಯಿಂಗ್ xi ಅನ್ನು ಸರಿಪಡಿಸಿಕೊಳ್ಳಲು ಯುಎಇ ವಿರುದ್ಧ ಅತ್ಯುತ್ತಮ ಅವಕಾಶ ಸಿಗಲಿದೆ. ಅಂದ ಹಾಗೆ ಭಾರತ ತಂಡದ ಪ್ಲೇಯಿಂಗ್ XI ಬಗ್ಗೆ ಗೌತಮ್ ಗಂಭೀರ್ ಅವರ ಮಾರ್ಗದರ್ಶನದ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಲೆ ನೋವು ಶುರುವಾಗಿದೆ. ಶುಭಮನ್ ಗಿಲ್ ಆಗಮನದಿಂದ ಅಗ್ರ ಕ್ರಮಾಂಕದಲ್ಲಿ ಬದಲಾವಣೆಯನ್ನು ನಾವು ನಿರೀಕ್ಷೆ ಮಾಡಬಹುದು. ಶುಭಮನ್ ಗಿಲ್ ಅವರಿಗೆ ಉಪ ನಾಯಕತ್ವ ನೀಡಿದ್ದರಿಂದ ಟೆಸ್ಟ್ ತಂಡದ ನಾಯಕ ಪ್ಲೇಯಿಂಗ್ XIನಲ್ಲಿ ಆಡುವುದು ಬಹುತೇಕ ಖಚಿತ. ಹಾಗಾಗಿ ಸಂಜು ಸ್ಯಾಮ್ಸನ್ ತನ್ನ ಆರಂಭಿಕ ಸ್ಥಾನವನ್ನು ಗಿಲ್‌ಗೆ ಬಿಟ್ಟುಕೊಡಬೇಕಾಗುತ್ತದೆ. ಕಳೆದ 10 ಇನಿಂಗ್ಸ್‌ಗಳಲ್ಲಿ ಸಂಜು ಸ್ಯಾಮ್ಸನ್ ಮೂರು ಶತಕಗಳನ್ನು ಬಾರಿಸಿದ್ದಾರೆ. ಆದರೂ ಗಿಲ್‌ಗೆ ಅವರು ತಮ್ಮ ಸ್ಥಾನವನ್ನು ತ್ಯಾಗ ಮಾಡಬಹುದು. ಸಂಜು ಸ್ಯಾಮ್ಸನ್ ಮ್ಯಾಚ್ ಫಿನಿಷರ್ ಆಗಿ ಆಡುವುದಿಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರು ಮ್ಯಾಚ್ ಫಿನಿಷಿಂಗ್ ಸಾಮರ್ಥ್ಯದಿಂದ ಸಂಜು ಅವರನ್ನು ಹಿಂದಿಕ್ಕಿ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.
