
ಉದಯವಾಹಿನಿ, ಬೆಳಗಾವಿ : ಗಣೇಶ ಚತುರ್ಥಿಯಲ್ಲಿ ಡಿಜೆ ಸದ್ದಿಗೆ ಜಿಲ್ಲಾಡಳಿತಗಳು ನಿಷೇಧ ಹೇರಿವೆ. ಇದರಿಂದಾಗಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಚೆಂದದ ಕಲೆಯ ಕಲಾ ತಂಡಗಳಿಗೆ ಬೇಡಿಕೆ ಹೆಚ್ಚಿದೆ.
ಬೆಣ್ಣೆನಗರಿಯಲ್ಲಿ ಕಲಾತಂಡಗಳು ಕಣ್ಮರೆಯಾಗಿದ್ದವು. ಕೆಲಸ ಇಲ್ಲದೇ ಬರೋಬ್ಬರಿ ಐದು ಸಾವಿರ ಕಲಾವಿದರು ಮೂಲೆ ಗುಂಪಾಗಿದ್ದರು. ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ಕಲೆಗೆ ಗುಡ್ ಬೈ ಹೇಳಿದ್ರು. ಸದ್ಯ ಸಾಂಸ್ಕೃತಿಕ ಕಲಾತಂಡಗಳಿಗೆ ಶುಕ್ರದೆಸೆ ಆರಂಭ ಆಗಿದೆ. ಜಿಲ್ಲಾಡಳಿತ ಗಣೇಶ – ಈದ್ ಮಿಲಾದ್ ಹಬ್ಬದ ವೇಳೆ ಶಬ್ದಮಾಲಿನ್ಯ ಆಗಲಿದೆ ಎಂದು ಡಿಜೆಗೆ ನಿಷೇಧ ಹೇರಿದೆ.
ಅದರ ಬದಲಿಗೆ ಸಾಂಸ್ಕೃತಿಕ ಕಲಾತಂಡಗಳಿಗೆ ಅವಕಾಶ ಕಲ್ಪಿಸಿದೆ. ಇದೀಗ ಕಣ್ಮರೆಯಾಗಿದ್ದ ಕಲಾತಂಡಗಳು ಗಣೇಶೋತ್ಸದಲ್ಲಿ ಮೆರಗು ಮೂಡಿಸುತ್ತಿವೆ. ದುಡಿಮೆ ಇಲ್ಲದೇ ಮೂಲೆಗುಂಪಾಗಿದ್ದ ಕಲಾವಿದರು ಗಣೇಶೋತ್ಸವಗಳಲ್ಲಿ ತಮ್ಮ ಚೆಂದದ ಕಲೆ ಅನಾವರಣ ಮಾಡುವ ಮೂಲಕ ದುಡಿಮೆ ಗಿಟ್ಟಿಸಿಕೊಂಡಿದ್ದಾರೆ. ಜಿಲ್ಲಾಡಳಿತದ ನಿರ್ಧಾರದಿಂದ ಹೊಟ್ಟೆ ತುಂಬುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ.ಎಂ, ಎಸ್ಪಿ ಉಮಾಪ್ರಶಾಂತ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
