ಉದಯವಾಹಿನಿ, ಬೆಂಗಳೂರು: ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು, ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಅವರು ಮಾತನಾಡಿದರು.
ನಾನು ರಾಜಪ್ಪ ಮೇಸ್ಟ್ರಿಂದ ಶಾಲಾ ಶಿಕ್ಷಣವನ್ನು ಹಾಗೂ ಪ್ರೊ.ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿತೆ ಎನ್ನುವ ಮೂಲಕ ತಮ್ಮ ಶಿಕ್ಷಕರನ್ನು ಸ್ಮರಿಸಿದ ಸಿಎಂ, ಇಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ವೈಚಾರಿಕ ಶಿಕ್ಷಣ. ಕೇವಲ ಪಾತ್ರೆ ತುಂಬಿಸುವುದು ಶಿಕ್ಷಣ ಅಲ್ಲ. ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ಶಿಕ್ಷಣದ ಉದ್ದೇಶ ಮತ್ತು ಮಹತ್ವವಾಗಿದೆ. ಇಂಥಾ ಶಿಕ್ಷಣ ನಮ್ಮ ಸರ್ಕಾರದ ಗುರಿ ಎಂದರು.
ಮೊದಲೆಲ್ಲ ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಸಂವಿಧಾನ ನಮ್ಮೆಲ್ಲರಿಗೂ ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ. ಆದ್ದರಿಂದ, ನಮ್ಮ ಸರ್ಕಾರ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಅರ್ಥೈಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ಮೌಲ್ಯಗಳಾಗಿದ್ದು ಇವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಮನುಷ್ಯತ್ವ ಹೊಂದಿರುವ ಅತ್ಯುನ್ನತ ನಾಗರಿಕರನ್ನು ಸೃಷ್ಟಿಸಬಹುದು. ಇದನ್ನು ಶಿಕ್ಷಕರು ಅರ್ಥ ಮಾಡಿಕೊಂಡು ನಾಗರಿಕ ಸಮಾಜ ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
