ಉದಯವಾಹಿನಿ, ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯ ಭೂ ಸಂತ್ರಸ್ತ ರೈತರಿಗೆ ಆಯಾ ಜಮೀನಿನ ಮಾನದಂಡದ ಆಧಾರದ ಮೇಲೆ ಪ್ರತಿ ಎಕರೆಗೆ 1.50 ಕೋಟಿಯಿಂದ 2.50 ಕೋಟಿ ರೂಪಾಯಿವರೆಗೂ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಲೋಗೋ, ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು.ರೈತರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿ: 2013ರ ಕಾಯ್ದೆ ಅನುಸಾರ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಲು ತೀರ್ಮಾನಿಲಾಗಿದೆ. ಜಿಲ್ಲಾಡಳಿತ ಕಾನೂನು ಮಾನದಂಡಗಳ ಆಧಾರದ ಮುಖ್ಯರಸ್ತೆ ಬಳಿ ಇರುವ ಜಮೀನಿಗೆ, ಒಳಭಾಗದಲ್ಲಿರುವ ಜಮೀನಿಗೆ ದರ ನಿಗದಿ ಮಾಡಲಿದೆ. ರೈತರಿಗೆ ಯಾವುದೇ ರೀತಿ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ರಾಜ್ಯದ ಯಾವುದೇ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಳ್ಳಲಾಗದ ತೀರ್ಮಾನವನ್ನು ಇಲ್ಲಿ ಮಾಡಿದ್ದೇವೆ. ಹಣ ಪಡೆಯದೇ ಭೂಮಿಯನ್ನು ಹಂಚಿಕೊಳ್ಳುವ ರೈತರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿ ನೀಡಲಾಗುವುದು ಎಂದು ತಿಳಿಸಿದರು.
ಈ ಎಲ್ಲ ಸೌಲಭ್ಯ ನೀಡಲು ತೀರ್ಮಾನ: ಇದರ ಜೊತೆಗೆ ಅಂತಿಮ ಅಧಿಸೂಚನೆಯ ದಿನಾಂಕದಿಂದ ಹಣಕಾಸು/ ಅಭಿವೃದ್ಧಿಪಡಿಸಿದ ಜಾಗವನ್ನು ಪರಿಹಾರ ನೀಡುವವರೆಗೆ ರೈತರ ಜೀವನೋಪಾಯಕ್ಕೆ ಪ್ರತಿ ಎಕರೆಗೆ ವಾರ್ಷಿಕ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಖುಷ್ಕಿ ಭೂಮಾಲೀಕರಿಗೆ ವಾರ್ಷಿಕವಾಗಿ 30 ಸಾವಿರ, ತರಿ ಭೂಮಾಲೀಕರಿಗೆ ವಾರ್ಷಿಕವಾಗಿ 40 ಸಾವಿರ, ಭಾಗಾಯ್ತು ಭೂ ಮಾಲೀಕರಿಗೆ ವಾರ್ಷಿಕ 50 ಸಾವಿರ ಅನುದಾನ ನೀಡಲಾಗುವುದು. ಭೂ ರತಹಿತ ಕಾರ್ಮಿಕರಿಗೆ ಹಾಗೂ ಭೂಮಿಯ ದಾಖಲೆ ಇಲ್ಲದವರಿಗೆ ಒಂದು ನಿವೇಶನ ಹಾಗೂ ವಾರ್ಷಿಕ 25 ಸಾವಿರ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಇದೆಲ್ಲದರ ಜೊತೆಗೆ ಆದಾಯ ತೆರಿಗೆ ವಿನಾಯಿತಿ, ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗುವುದು. ಇನ್ನು ಈ ನಗರಕ್ಕೆ ಕಲ್ಪಿಸಲಾಗುವ ರಸ್ತೆ ಸಂಪರ್ಕಕ್ಕೆ ಜಮೀನು ಕಳೆದುಕೊಳ್ಳುವವರಿಗೂ ಇದೇ ಮಾದರಿಯ ಪರಿಹಾರವನ್ನು ನೀಡಲಾಗುವುದು. ರೈತರು ದಾಖಲೆ ಸಮೇತ ಪರಿಹಾರಕ್ಕೆ ಅರ್ಜಿ ಹಾಕಿದರೆ, ಮೂರು ದಿನಗಳಿಂದಲೇ ಪರಿಹಾರ ನೀಡಲಾಗುವುದು ಎಂದರು.
