ಉದಯವಾಹಿನಿ, ಚಾಮರಾಜನಗರ: ಕೆಲವೊಮ್ಮೆ ಮಕ್ಕಳು ಮಾಡುವ ತುಂಟಾಟ ಅಥವಾ ಹೇಳುವ ಸುಳ್ಳುಗಳು ಪಾಲಕರನ್ನು ಪೇಚಿಗೆ ಸಿಲುಕಿಸುತ್ತವೆ. ಅಂಥಹದ್ದೇ ಒಂದು ಪ್ರಕರಣ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಈ ಕೇಸ್ನಲ್ಲಿ 10ರ ಪ್ರಾಯದ ಈ ವಿದ್ಯಾರ್ಥಿ ಪಾಲಕರನ್ನು ಮಾತ್ರವಲ್ಲ, ಪೊಲೀಸರನ್ನೂ ತನ್ನ ಸುಳ್ಳಿನಿಂದ ಯಾಮಾರಿಸಿದ್ದಾನೆ.
ತನ್ನನ್ನು ಮೂವರು ಅಪಹರಣ ಮಾಡಿದ್ದರು. ಕಾರಿನಲ್ಲಿ ಕರೆದೊಯ್ದು ಅರ್ಧ ಗಂಟೆಯ ಬಳಿಕ ರಸ್ತೆಯಲ್ಲಿ ಬಿಟ್ಟು ಹೋದರು. 50 ರೂಪಾಯಿ ಕೊಟ್ಟು ಗೋಬಿ, ಐಸ್ಕ್ರೀಂ ತಿನ್ನು ಎಂದು ತಾಕೀತು ಮಾಡಿದರು. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ತಂದೆ ಮಗನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ. ಆತನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿದ್ಯಾರ್ಥಿಯ ಸಮೇತ ಸ್ಥಳ ಮಹಜರು ನಡೆಸಿದ್ದಾರೆ. ಆದರೆ, ವಿದ್ಯಾರ್ಥಿ ಹೇಳಿದ್ದು ಶುದ್ಧ ಸುಳ್ಳು. ತನ್ನನ್ನು ಕಿಡ್ನಾಪ್ ಮಾಡಿದ್ದರು ಎಂಬ ಕಥೆ ಕಟ್ಟಲು ‘ಗೋಬಿ ಮಂಚೂರಿ’ ಕಾರಣ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಪ್ರಕರಣದ ವಿವರ: ನಗರದ ಭ್ರಮರಾಂಭ ಪ್ರದೇಶದ ನಿವಾಸಿಯಾದ ಈ ವಿದ್ಯಾರ್ಥಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಸೆಪ್ಟೆಂಬರ್ 2ನೇ ತಾರೀಖಿನಂದು ಎಂದಿನಂತೆ ಶಾಲೆ ಮುಗಿದ ಬಳಿಕ ಸಂಜೆ ಟ್ಯೂಷನ್ಗೆ ತೆರಳಿದ್ದ. ಆದರೆ, ಗೋಬಿ ತಿನ್ನುವ ಆಸೆಯಾಗಿ ಟ್ಯೂಷನ್ ತಪ್ಪಿಸಿಕೊಂಡು ನಗರಕ್ಕೆ ಆಗಮಿಸಿದ್ದಾನೆ. ಅಲ್ಲಿ ತಿನಿಸು ತಿಂದ ಬಳಿಕ, ತನ್ನ ಮನೆಯ ಪಕ್ಕದ ಮಹಿಳೆಯನ್ನು ಕಂಡಿದ್ದಾನೆ.
ನಗರಕ್ಕೆ ಬಂದ ವಿದ್ಯಾರ್ಥಿಯನ್ನು ಆಕೆ ವಿಚಾರಿಸಿದ್ದಾರೆ. ತಾನು ಟ್ಯೂಷನ್ ತಪ್ಪಿಸಿಕೊಂಡು ಇಲ್ಲಿಗೆ ಬಂದ ಬಗ್ಗೆ ಮನೆಯವರಿಗೆ ತಿಳಿಸುವ ಭಯದಲ್ಲಿ ಆತ ತನ್ನನ್ನು ಮೂವರು ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಇಲ್ಲಿಗೆ ತಂದು ಬಿಟ್ಟರು. ಗೋಬಿ ತಿನ್ನಲು ಹೇಳಿದರು ಎಂದು ತಿಳಿಸಿದ್ದಾನೆ. ಅಪಹರಣ ಮಾಡಲಾಗಿದೆ ಎಂದು ಕೇಳಿದ ಮಹಿಳೆ ತಕ್ಷಣವೇ ವಿದ್ಯಾರ್ಥಿಯ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದೇ ದಿನ (ಮಂಗಳವಾರ) ರಾತ್ರಿ ನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದಾರೆ.
