ಉದಯವಾಹಿನಿ, ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತನಿಖೆ ವೇಳೆ, ಜೈಲು ಅಧಿಕಾರಿಗಳೇ ಕೈದಿಗಳಿಗೆ ಕಳ್ಳ ಮಾರ್ಗದಲ್ಲಿ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿ ಪ್ರತಿ ತಾಸಿಗೆ 300 ರೂ.ಗಳನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ವಾರ್ಡರ್ ಒಬ್ಬರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ಮತ್ತು ಆರೋಪ ಪಟ್ಟಿ ರದ್ದು ಕೋರಿ ಬೆಂಗಳೂರಿನ ಕೇಂದ್ರ ಕಾರಾಗೃಹದ ಮುಖ್ಯ ವಾರ್ಡರ್ ಆಗಿದ್ದ ಬಸವರಾಜ ಆರ್. ಉಪ್ಪಾರ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ನ್ಯಾಯಪೀಠ, ಪ್ರಕರಣದ ಸಂಬಂಧ ಎಫ್ಐಆರ್ ಮತ್ತು ತನಿಖಾಧಿಕಾರಿಗಳು ಸಲ್ಲಿಸಿದ್ದ ಆರೋಪ ಪಟ್ಟಿ ರದ್ದುಪಡಿಸಲು ನಿರಾಕರಿಸಿ, ಅರ್ಜಿಯನ್ನು ತಿರಸ್ಕರಿಸಿದೆ.
ಅಲ್ಲದೆ, ಅರ್ಜಿದಾರರಾಗಿರುವ ಆರೋಪಿಯ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸಲು ಮೇಲ್ನೋಟಕ್ಕೆ ಅಗತ್ಯ ಸಾಕ್ಷಾಧಾರಗಳಿವೆ. ಅಲ್ಲದೆ, ಪ್ರಕರಣದಲ್ಲಿ ಅರ್ಜಿದಾರರು ಸೇರಿದಂತೆ ಇತರ ಆರೋಪಿಗಳ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದೆ. ಆದ್ದರಿಂದ ಆರೋಪ ಸಾಬೀತುಪಡಿಸುವುದಕ್ಕೆ ತನಿಖಾಧಿಕಾರಿಗಳಿಗೆ ಅವಕಾಶ ನೀಡಬೇಕಾಗಿದೆ ಎಂದು ಪೀಠ ಹೇಳಿದೆ.ಜತೆಗೆ, ಪ್ರಕರಣದಲ್ಲಿ ಎಲ್ಲಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದ್ದು, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂಬ ಅರ್ಜಿದಾರರ ವಾದ ಪುರಸ್ಕರಿಸಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬರಿಗೆ ಪೆರೋಲ್ ಮೇಲೆ ಬಿಡುಗಡೆಗೆ ಶಿಪಾರಸು ಮಾಡುವಂತೆ ಕೋರಿ ಜೈಲು ಸೂಪರಿಡೆಂಟ್ ಆಗಿದ್ದ ಎಸ್.ಹೆಚ್. ಜಯರಾಮಯ್ಯಗೆ ಮನವಿ ಮಾಡಲಾಗಿತ್ತು. ಇದಕ್ಕಾಗಿ ಅವರು 10 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೊತ್ತದಲ್ಲಿ 5 ಸಾವಿರ ರೂ.ಗಳನ್ನು ಮುಂಗಡವಾಗಿ ಪಾವತಿಗೆ ಕೋರಿದ್ದರು. ಲಂಚಕ್ಕೆ ಬೇಡಿಕೆಯಿಟ್ಟ ಆರೋಪಕ್ಕೆ ಸಂಬಂದಪಟ್ಟಂತೆ ಕೈದಿಯ ಪತ್ನಿ ದಾಖಲೆಗಳೊಂದಿಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರುನ್ನು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಟ್ಯಾಪ್ ಮಾಡುವುದಕ್ಕೆ ಸಿದ್ದತೆ ಮಾಡಿಕೊಂಡಿದ್ದರು.
ಈ ಸಂಬಂಧ ಮೊದಲ ಆರೋಪಿ ಜಯರಾಮ್ ಅವರ ವಿರುದ್ಧ ದೂರು ದಾಖಲಾಗಿತ್ತು. ಜಯರಾಮ್ ಸೂಚನೆ ಮೇರೆಗೆ ಜೈಲು ವಾರ್ಡರ್ ಆಗಿದ್ದ ಬಂಡೆಪ್ಪ ಎಸ್.ಬಡಿಗೇರ್, ಅವರು ಹಣ ಪಡೆದುಕೊಳ್ಳಲು ಸೂಚಿಸಿದ್ದರು. ಈ ಹಣವನ್ನು ತೆಗೆದುಕೊಂಡು ಬರುವುದಕ್ಕಾಗಿ ಬಡಿಗೇರ್ 1 ಸಾವಿರ ರೂ.ಗಳ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಮೊತ್ತವನ್ನು ಕೈದಿಯ ಪತ್ನಿ ಆರೋಪಿಗಳಿಗೆ ಹಸ್ತಾಂತರಿಸಿದ್ದರು. ಬಳಿಕ ನಡೆದಿದ್ದ ಟ್ರ್ಯಾಪ್ನಲ್ಲಿ ಎಲ್ಲ ಆರೋಪಿಗಳು ಸಿಕ್ಕಿಬಿದ್ದಿದ್ದರು.
