ಉದಯವಾಹಿನಿ, ಚೆನ್ನೈ: ಸರ್ಕಾರಿ ಕುಂದುಕೊರತೆ ಪರಿಹರಿಸುವ ಕೇಂದ್ರವೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವೃದ್ಧರ ಮೇಲೆ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸಾಥೂರ್‌ನಲ್ಲಿ ನಡೆದಿದೆ. ಹಲ್ಲೆಯ ದೃಶ್ಯದ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಸರ್ಕಾರವು ಪ್ರಸ್ತುತ ರಾಜ್ಯಾದ್ಯಂತ ಉಂಗಲುಡನ್ ಸ್ಟಾಲಿನ್ (ನಿಮ್ಮ ಜತೆ ಸ್ಟಾಲಿನ್) ಎಂಬ ಕೇಂದ್ರಗಳನ್ನು ನಡೆಸುತ್ತಿದೆ. ಇದು ಅಧಿಕಾರಿಗಳನ್ನು ಜನರ ಹತ್ತಿರ ತರುವ ಮೂಲಕ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಜನರು, ವಿಶೇಷವಾಗಿ ಭೂ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವವರು ಪರಿಹಾರವನ್ನು ಪಡೆಯಲು ಕೇಂದ್ರಗಳಿಗೆ ಹಾಜರಾಗುತ್ತಿದ್ದಾರೆ. ಸಾಥೂರ್ ಕೇಂದ್ರದಲ್ಲಿ, ಉಪ್ಪುಪೆಟ್ಟೈ ನಿವಾಸಿ ವೆಂಕಟಪತಿ ಎಂದು ವೃದ್ಧರು ಅರ್ಜಿ ಸಲ್ಲಿಸಿದರು. ಆದರೆ ಸಂಬಂಧಪಟ್ಟ ಅಧಿಕಾರಿ ಸ್ವೀಕೃತಿ ಚೀಟಿಯನ್ನು ನೀಡಲು ನಿರಾಕರಿಸಿದರು. ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ವೆಂಕಟಪತಿ ತಲೆಗೆ ಗಾಯವಾಗಿದೆ. ವೆಂಕಟಪತಿ ಕೂಡ ಪೊಲೀಸ್ ಅಧಿಕಾರಿಯ ನಡೆಗೆ ಸಿಟ್ಟಾಗಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.
